ನಟಿ ಸಮಂತಾ ರುತ್ ಪ್ರಭು ಹಾಗೂ ನಿರ್ದೇಶಕ ರಾಜ್ ನಿಧಿಮೋರು ವೈವಾಹಿಕ ಜೀವನ ಆರಂಭಿಸಿದ್ದಾರೆ.
ಸೋಮವಾರ ಮುಂಜಾನೆ ತಮಿಳುನಾಡಿನ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಸಮಂತಾ ಮತ್ತು ರಾಜ್ ‘ಭೂತ ಶುದ್ಧಿ ವಿಹಾಹ’ ಪದ್ಧತಿಯಂತೆ ವಿವಾಹವಾಗಿದ್ದಾರೆ.
ಕೆಲವು ತಿಂಗಳಿಂದ ಹರಡಿದ್ದ ವದಂತಿಗಳಿಗೆ ಮದುವೆ ಮೂಲಕ 38 ವರ್ಷದ ಸಮಂತಾ ಉತ್ತರ ನೀಡಿದ್ದಾರೆ.
ಏನಿದು ‘ಭೂತ ಶುದ್ಧಿ ವಿವಾಹ’?
ಭೂತ ಶುದ್ಧಿ (ಅಕ್ಷರಶಃ “ಭೂತಗಳ ಶುದ್ಧೀಕರಣ” ಎಂದರ್ಥ). ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಪಂಚಭೂತಗಳನ್ನು ಶುದ್ಧೀಕರಿಸುವ ಯೋಗ ಪ್ರಕ್ರಿಯೆಯಾಗಿದೆ. ಈ ಪದ್ಧತಿ ಯೋಗ ವ್ಯವಸ್ಥೆಯಲ್ಲಿ ನಡೆದುಕೊಂಡು ಬಂದಿದೆ. ದಾಂಪತ್ಯ ಜೀವನಕ್ಕೆ ಕಾಲಿಡುವ ಇಬ್ಬರ ಭಾವನೆಗಳು, ಆಲೋಚನೆ ಮತ್ತು ದೈಹಿಕ ಗಡಿಮೀರಿ ಸಂಪರ್ಕ ಸಾಧಿಸುವ ಗುರಿಯನ್ನು ಈ ವಿವಾಹ ಪದ್ಧತಿ ಒಳಗೊಂಡಿದೆ ಎಂದು ಸದ್ಗುರು ತಿಳಿಸಿದ್ದಾರೆ.
ಈ ರೀತಿಯ ವಿವಾಹ ಆಚರಣೆ ಪ್ರಾಚೀನ ಯೋಗ ಸಂಪ್ರದಾಯಗಳಿಂದ ಪ್ರೇರಿತವಾಗಿದೆ ಮತ್ತು ಇದನ್ನು ಹೆಚ್ಚಾಗಿ ಪವಿತ್ರ ಸ್ಥಳಗಳಲ್ಲಿಯೇ ನಡೆಸಲಾಗುತ್ತದೆ. ಉದಾಹರಣೆಗೆ, ಈಶಾ ಫೌಂಡೇಶನ್‌ಗೆ ಸಂಬಂಧಿಸಿದ ಲಿಂಗ ಭೈರವಿ ದೇವಾಲಯ. ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಪ್ರಕಾರ, “ವಿವಾಹ್ ಒಂದು ನಿರ್ದಿಷ್ಟ ರೀತಿಯ ಪವಿತ್ರೀಕರಣ. ಎರಡು ಜೀವನಗಳು ಒಂದರಲ್ಲಿ ವಿಲೀನಗೊಳ್ಳಲು ಪ್ರಯತ್ನಿಸುವುದರಲ್ಲಿ ಒಂದು ನಿರ್ದಿಷ್ಟ ಸೌಂದರ್ಯವಿದೆ” ಎಂದು ತಿಳಿಸಿದ್ದಾರೆ.
ಭೂತ ಶುದ್ಧಿ ವಿವಾಹ ಆಚರಣೆ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಆಧ್ಯಾತ್ಮಿಕ ಒಲವು ಹೊಂದಿರುವ ಜನರ ಗಮನ ಸೆಳೆಯುತ್ತಿವೆ. ಈ ಬದಲಾವಣೆ ಪ್ರಾಚೀನ ಮೌಲ್ಯಗಳಿಗೆ ಮರಳುವಿಕೆಯಾಗಿದೆ. ಪ್ರಸ್ತುತ ಅದ್ಧೂರಿ, ಆಧುನಿಕ ವಿವಾಹಗಳಿಗೆ, ಇದು ಅರ್ಥಪೂರ್ಣ ಪರ್ಯಾಯ ಅಂತಲೇ ಹೇಳಬಹುದು.


