ವಿವಾಹಿತ ಪ್ರೇಯಸಿಯನ್ನು ಕೊಂದು ವಿವಾಹಿತ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಚೇಳೂರು ತಾಲೂಕಿನಲ್ಲಿ ನಡೆದಿದೆ. ಚೇಳೂರು ತಾಲೂಕಿನ ಗರಿಗಿರೆಡ್ಡಿ ಪಾಳ್ಯದಲ್ಲಿ ಸಲ್ಮಾ ಎಂಬಾಕೆಯನ್ನು ಬಾಬಾಜಾನ್ ಚಾಕುವಿನಿಂದ ಕತ್ತು ಕೊಯ್ದು ಸಾಯಿಸಿದ್ದಾನೆ. ಅಲ್ಲಿಂದ ಚೇಳೂರಿನ ತನ್ನ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಲ್ಮಾಗೆ ಗಂಡ ಮತ್ತು ಗಂಡ ಇಬ್ಬರು ಮಕ್ಕಳಿದ್ದು, ಕಳೆದ ಆರು ವರ್ಷಗಳಿಂದ ಬಾಬಾಜಾನ್ ಜೊತೆ ಸಂಬಂಧದಲ್ಲಿದ್ದಳು. ಬಾಬಾಜಾನ್‌ಗೂ ಮದುವೆಯಾಗಿ ಮೂವರು ಮಕ್ಕಳಿದ್ದು, ಹೆಂಡತಿ ಮಕ್ಕಳು ಬಿಟ್ಟು ಹೋಗಿದ್ದಾರೆ.
ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಇದಲ್ಲದೆ ಬೇರೆ ಕಾರಣ ಇರಬಹುದೇ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪ: ಮಹಿಳೆ ಆತ್ಮಹತ್ಯೆ
ಬೆಂಗಳೂರಿನ ಬನಶಂಕರಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೀರ್ತಿ ಆತ್ಮಹತ್ಯೆ ಮಾಡಿಕೊಂಡವರು. ಎರಡು ವರ್ಷಗಳ ಹಿಂದೆ ಕೀರ್ತಿ ಹಾಗೂ ಗುರುಪ್ರಸಾದ್ ಮದುವೆಯಾಗಿದ್ದರು. ಪತಿ ಗುರುಪ್ರಸಾದ್ ಆಕೆಯ ಪೋಷಕರಿಗೆ ಮಾಹಿತಿ ನೀಡಿ ತಲೆ ತಿರುಗಿ ಬಿದ್ದಿದ್ದಳು, ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಹೇಳಿದ್ದರು.
ಹೆಚ್ಚಿನ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರೂ ಎರಡು ತಿಂಗಳಿಂದ ಗಂಡನ ಮನೆಯವರೆಲ್ಲ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಕಿರುಕುಳ ವಿಷಯವನ್ನು ಕೀರ್ತಿ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಗಿ ತಿಳಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


