ಬಾಡಿಗೆ ಕಾರು ಚಾಲಕನೊಬ್ಬ ಸಿಬಿಐ ನಿವೃತ್ತ ಎಸ್ಪಿಯನ್ನು ಯಾಮಾರಿಸಿ 97 ಲಕ್ಷ ರೂ. ಸಮೇತ ಪರಾರಿಯಾಗಿದ್ದು, ಕೆಲವೇ ಗಂಟೆಯಲ್ಲಿ ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನವರರಾದ ಸಿಬಿಐನ ನಿವೃತ್ತ ಎಸ್ಪಿ ಗುರುಪ್ರಸಾದ್ ಪತ್ನಿ ಲಲಿತಾ ಜತೆ ಬಾಡಿಗೆ ಕಾರಿನಲ್ಲಿ ಬಳ್ಳಾರಿಗೆ ಹೋಗಿ ಜಮೀನು ಮಾರಾಟ ಮಾಡಿ 97ಲಕ್ಷ ರೂ. ಪಡೆದಿದ್ದರು. ಅದೇ ಕಾರಲ್ಲಿ ವಾಪಸ್ ಬೆಂಗಳೂರಿಗೆ ಹೊರಟಿದ್ದಾಗ ಮಧ್ಯಾಹ್ನ ಚಳ್ಳಕೆರೆ ಪಟ್ಟಣದ ಹೋಟೆಲ್ ಬಳಿ ಊಟ ಮಾಡಿದ್ದರು. ಬೇಗನೆ ಊಟ ಮುಗಿಸಿದ ಚಾಲಕ, ಕಾರಲ್ಲಿದ್ದ ಹಣದ ಸಮೇತ ಪರಾರಿ ಆಗಿದ್ದಾನೆ.
ಗುರುಪ್ರಸಾದ್ ತಕ್ಷಣ ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು ಡಿವೈಎಸ್ಪಿ ರಾಜಣ್ಣ, ಸಿಪಿಐ ಕುಮಾರ್, ಪಿಎಸ್ಐ ಈರೇಶ್ ಹಾಗೂ ತಂಡ ಬೆನ್ನತ್ತಿದೆ. ಪಾವಗಡ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಚಾಲಕ ರಮೇಶ್ ವೇಗವಾಗಿ ಚಾಲನೆ ಮಾಡಿದಾಗ ಮರಕ್ಕೆ ಕಾರು ಡಿಕ್ಕಿಯಾಗಿದೆ. ಪೊಲೀಸರು ಆರೋಪಿಯ ಬಂಧಿಸಿ ಹಣ ವಶಕ್ಕೆ ಪಡೆದಿದ್ದಾರೆ.
ಆಂಧ್ರ ಪ್ರದೇಶ ಹಿಂದೂಪುರ ಮೂಲದ ರಮೇಶ್, ಬೆಂಗಳೂರಿನಿಂದ ಗುರುಪ್ರಸಾದ್ ಜತೆಗೆ ಕಾರು ಚಾಲನೆ ಮಾಡಿಕೊಂಡು ಬರುವಾಗ ವಿಷಯ ತಿಳಿದುಕೊಂಡಿದ್ದಾನೆ. ಬಳ್ಳಾರಿಯಲ್ಲಿ ಜಮೀನು ಮಾರಾಟ ಮಾಡಿ 97 ಲಕ್ಷ ರೂ. ಪಡೆದು ಕಾರಲ್ಲಿಟ್ಟಾಗ ಕದಿಯಲು ಹೊಂಚು ಹಾಕಿದ್ದಾನೆ. ಚಳ್ಳಕೆರೆ ಬಳಿ ಊಟಕ್ಕೆ ಕಾರು ನಿಲ್ಲಿಸುತ್ತಿದ್ದಂತೆಯೇ ಹೋಟೆಲ್‌ಗೆ ತೆರಳಿ ಬೇಗ ಊಟ ಮುಗಿಸಿ ಬಂದು ಹಣದ ಸಮೇತ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಘಟನೆ ನಡೆದ ನಾಲ್ಕು ತಾಸುಗಳಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.