ಔರಾದ್ : ಪತ್ರಕರ್ತ ರವಿ ಭೂಸಂಡೆ ಮೇಲೆ ಪ್ರಾದೇಶಿಕ ಅರಣ್ಯಾಧಿಕಾರಿಗಳು ಹಲ್ಲೆ ನಡೆಸಿದ್ದನ್ನು ವಿರೋಧಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಗುರುವಾರ ಪಟ್ಟಣದ ತಹಸೀಲ್ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ತಹಸೀಲ್ ಕಚೇರಿಯ ಆವರಣದಲ್ಲಿ ಜಮಾಯಿಸಿದ್ದ ಮಾಧ್ಯಮದವರು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಬೀದರ ಜಿಲ್ಲೆಯ ಕರ್ತವ್ಯನಿರತ ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಹಲ್ಲೆ ನಡೆಸಿದ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ, ಬಿಟ್ ವನಪಾಲಕರನ್ನು ಕುಡಲೇ ಬಂಧಿಸುವ ಮೂಲಕ ಅವರನ್ನು ಸೇವೆಯಿಂದ ವಜಾಗೊಳಿಸುವ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವಿ ಭೂಸಂಡೆ ಅಂದು ಮನ್ನಾಬೆಳ್ಳಿ ಗ್ರಾಮದಿಂದ ಚಿದ್ರಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಹಾಗೂ ಸಾರ್ವಜನಿಕರ ನಡುವೆ ವಾಗ್ದಾಳಿ ನಡೆಯುತ್ತಿರುವುದನ್ನು ಕಂಡ ರವಿ ಭೂಸಂಡೆ ಸುದ್ದಿಗಾಗಿ ಪೋಟೋ ತೆಗೆಯಲು ಹೋದಾಗ ಅರಣ್ಯಾಧಿಕಾರಿ ದಸ್ತಗಿರ, ಉಪವಲಯ ಅರಣ್ಯಾಧಿಕಾರಿ ಶಾಂತಕುಮಾರ, ವಲಯ ಅರಣ್ಯಾಧಿಕಾರಿ ಗಜಾನಂದ, ಬಿಟ್ ವನಪಾಲಕ ಸಂಗಮೇಶ ಸೇರಿದಂತೆ ಇನ್ನೂ ಮೂರಾಲ್ಕು ಜನರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿ, ತೇಜೋವಧೆ ಮಾಡಿದ್ದಾರೆ ಎಂದು ದೂರಿದರು.
ಈ ಕೂಡಲೇ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿರುವುದು ಶೋಚನೀಯ. ಪತ್ರಿಕಾರಂಗ ಶೋಷಿತರ ಪರ, ಅಸಹಾಯಕರ ಪರ, ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲಸ ಮಾಡುತ್ತದೆ. ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಪತ್ರಿಕಾರಂಗ ಸಾಕಷ್ಟು ಬಾರಿ ಜಾಗೃತಿ ಮೂಡಿಸಿದೆ. ಮಾಧ್ಯಮದ ರಕ್ಷಣೆಗೆ ಸರಕಾರ ನೂತನ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಪತ್ರಕರ್ತ ಮಲ್ಲಪ್ಪ ಗೌಡಾ ಮಾತನಾಡಿ, ನಾನು ಪತ್ರಕರ್ತ ಎಂದು ರವಿ ಭೂಸಂಡೆ ಹೇಳಿದರೂ ಮತ್ತಷ್ಟು ಅತಿರೇಕಕ್ಕೇರಿದ ಅರಣ್ಯ ಇಲಾಖೆಯ ಅಧಿಕಾರಿಗಳು ರವಿ ಅವರನ್ನು ಕಪಾಳಮೋಕ್ಷ ಮಾಡುವ ಮೂಲಕ ದರ್ಪ ಮೆರೆದಿದ್ದಾರೆ. ಅಲ್ಲದೇ ತಮ್ಮ ಖಾಸಗಿ ವಾಹನದಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಕರೆದೊದು ಬಿಟ್ಟಿದ್ದಾರೆ. ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವುದು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ ಮಹೇಶ ಪಾಟೀಲ್ ಅವರಿಗೆ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಮನ್ಮಥ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುನಿಲ ಜಿರೋಬೆ, ಹಿರಿಯ ಪತ್ರಕರ್ತ ಶರಣಪ್ಪ ಚಿಟಮೇ, ಅಂಬ್ರೇಶ್ ಚಿದ್ರೆ, ರಿಯಾಜ್ ಪಾಶಾ, ಅಹ್ಮದ್ ಜಂಬಗಿ, ಅಮರ ಸ್ವಾಮಿ, ಸುಧೀರಕುಮಾರ ಪಾಂಡ್ರೆ, ಶಿವಕುಮಾರ ಸಾದುರೆ, ರವಿಕುಮಾರ ಶಿಂಧೆ, ರವಿ ಮಠಪತಿ, ರಾಚಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು.