Menu

ವಕ್ಫ್ ತಿದ್ದುಪಡಿ ಮಸೂದೆಗೆ ಮಧ್ಯಂತರ ತಡೆ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ವಕ್ಫ್ ಮಂಡಳಿಗಳಿಗೆ ಮುಸ್ಲಿಂ, ಮುಸ್ಲಿಂಮೇತರ ಸದಸ್ಯರ ನೇಮಕ ಮಾಡದಂತೆ ಮತ್ತು ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಸುಪ್ರೀಂಕೋರ್ಟ್ ಮುಂದಿನ ಆದೇಶದವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ವಕ್ಫ್ ತಿದ್ದುಪಡಿ ಕಾಯ್ದೆಗೆ ಪೂರ್ಣ ಪ್ರಮಾಣ ತಡೆ ನೀಡಲು ನಿರಾಕರಿಸಿತು.

ಕೇಂದ್ರ ಸರ್ಕಾರವು ತನ್ನ ಪ್ರತಿಕ್ರಿಯೆಯನ್ನು ಒಂದು ವಾರದೊಳಗೆ ಸಲ್ಲಿಸಬೇಕೆಂದು ಕೋರ್ಟ್ ಸೂಚಿಸಿದೆ. ಅರ್ಜಿದಾರರಿಗೆ ಕೇಂದ್ರದ ಪ್ರತಿಕ್ರಿಯೆಯನ್ನು ಪರಿಶೀಲಿಸಲು ಐದು ದಿನಗಳ ಕಾಲಾವಕಾಶ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ನಿಗದಿಪಡಿಸಲಾಗಿದೆ.

ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಸರ್ಕಾರವು ಜನರಿಗೆ ಜವಾಬ್ದಾರವಾಗಿದೆ. ಕೆಲವು ಪ್ರಕರಣಗಳಲ್ಲಿ ಸಂಪೂರ್ಣ ಹಳ್ಳಿಗಳನ್ನು ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಜನರು ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಲಕ್ಷಾಂತರ ಜನರ ಕಳವಳಕ್ಕೆ ಪ್ರತಿಕ್ರಿಯೆಯಾಗಿ ಈ ಶಾಸನವನ್ನು ತರಲಾಗಿದೆ. ಒಂದರ ನಂತರ ಒಂದರಂತೆ ಲೆಕ್ಕವಿಲ್ಲದಷ್ಟು ಪ್ಲಾಟ್‌ಗಳನ್ನು ವಕ್ಫ್ ಎಂದು ಘೋಷಿಸಲಾಗುತ್ತಿದೆ. ಈ ವಿಷಯವು ಗಮನಾರ್ಹ ಸಾರ್ವಜನಿಕ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಸಿದರು.

ಈ ಕಾರಣಕ್ಕೆ ಯಾವುದೇ ಮಧ್ಯಂತರ ನಿರ್ಧಾರಕ್ಕೆ ಕೋರ್ಟ್ ಬರಬಾರದು. ಕೋರ್ಟ್ ಆತುರದ ಮಧ್ಯಂತರ ಆದೇಶ ಹೊರಡಿಸಬಾರದು. ಮಧ್ಯಂತರ ತಡೆ ನೀಡುವುದು ಅತ್ಯಂತ ಕಠಿಣ ಹೆಜ್ಜೆಯಾಗಲಿದೆ. ಈ ವಿಷಯಕ್ಕೆ ಆಳವಾದ ಚರ್ಚೆಯ ಅಗತ್ಯವಿದೆ. ಈ ವಿಚಾರವನ್ನು ಆತುರದಿಂದ ನಿರ್ಧರಿಸಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ದಾಖಲೆ ಕೇಂದ್ರ ಸರಕಾರ ಸಲ್ಲಿಸಲಿದೆ. ಪ್ರಾಥಮಿಕ ಪ್ರತಿಕ್ರಿಯೆಯನ್ನು ಸಲ್ಲಿಸಲು ಒಂದು ವಾರದ ಸಮಯ ಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ಪೀಠ, ಮುಂದಿನ ವಿಚಾರಣೆಯವರೆಗೆ ವಕ್ಫ್‌ ಮಂಡಳಿಗೆ ಮುಸ್ಲಿಮ್‌ ಅಥವಾ ಮುಸ್ಲಿಮೇತರರನ್ನು ನೇಮಕ ಮಾಡುವಂತಿಲ್ಲ ಮತ್ತು ವಕ್ಫ್ ಆಸ್ತಿ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಹೇಳಿತು. ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ 7 ದಿನಗಳ ಕಾಲಾವಕಾಶ ನೀಡಿತು, ಅರ್ಜಿದಾರರು 5 ದಿನಗಳಲ್ಲಿ ಕೇಂದ್ರದ ಉತ್ತರಕ್ಕೆ ಮರು ಪ್ರತಿಕ್ರಿಯೆ ಸಲ್ಲಿಸಬಹುದು ಎಂದು ಹೇಳಿತು.

ಇದೇ ವೇಳೆ ಇಷ್ಟು ಅರ್ಜಿಗಳನ್ನು ನಿಭಾಯಿಸುವುದು ಅಸಾಧ್ಯ. ಕೇವಲ 5 ಅರ್ಜಿಗಳನ್ನು ಮಾತ್ರ ಆಲಿಸಲಾಗುವುದು. ಯಾವ ಐದು ಅರ್ಜಿಗಳನ್ನು ವಿಚಾರಣೆ ನಡೆಸಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಬಳಿಕ ಮುಂದಿನ ವಿಚಾರಣೆಯವರೆಗೆ ‘ವಕ್ಫ್ ಬೈ ಡೀಡ್’ ಮತ್ತು ‘ಬಳಕೆದಾರರಿಂದ ವಕ್ಫ್’ ಅನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಪರ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದರು.

Related Posts

Leave a Reply

Your email address will not be published. Required fields are marked *