ಇಸ್ಲಮಾಬಾದ್: 13 ಲಕ್ಷ ಬಲಿಷ್ಠ ಸೇನೆ ಹೊಂದಿರುವ ಭಾರತದಿಂದಲೇ ಉಗ್ರರನ್ನು ಮಟ್ಟಹಾಕಲು ಸಾಧ್ಯವಾಗಿಲ್ಲ. ಇನ್ನು ನಮ್ಮನ್ನು ಮಣಿಸಲು ಸಾಧ್ಯವೇ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ವಿವಾದಾತ್ಮಕ ಹೇಳಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿಯರನ್ನು ಉದ್ದೇಶಿಸಿ ಮಾತನಾಡಿದ ಅವರು, 1947ರ ಒಪ್ಪಂದದಂತೆ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರ ಅಥವಾ ಪಾಕಿಸ್ತಾನಕ್ಕೆ ವಹಿಸುವ ಕುರಿತು ಎರಡು ರಾಷ್ಟ್ರ ನೀತಿಯನ್ನು ಬೆಂಬಲಿಸಿ ಮಾತನಾಡಿದರು.
ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ವಿದೇಶೀ ಬಂಡವಾಳ ಹಾಗೂ ನೆರವು ಸಿಗದೇ ಇರುವುದನ್ನು ಪ್ರಸ್ತಾಪಿಸಿದ ಅವರು, 1.3 ದಶಲಕ್ಷ ಸೈನಿಕರನ್ನು ಹೊಂದಿರುವ ಭಾರತದಿಂದಲೇ ಭಯೋತ್ಪಾದನೆ ಹಿಮ್ಮೆಟ್ಟಿಸಲು ಆಗಿಲ್ಲ. ಆದರೆ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತದೆ ಎಂದರು.
ನಮ್ಮ ದೇಶ ಹಿಂದೂಗಳಂತೆ ದೇಶವಾಗಿಲ್ಲ. ಬದಲಾಗಿ ಉತ್ಕೃಷ್ಟ ಸಂಸ್ಕೃತಿ, ಸಿದ್ಧಾಂತ, ವಿಚಾರ ಹಾಗೂ ಸಂಪತ್ತು ಹೊಂದಿರುವ ಸಮೃದ್ಧ ದೇಶವಾಗಿದೆ. ನಮ್ಮ ದೇಶದ ಇತಿಹಾಸ ಹಾಗೂ ಪರಂಪರೆಯನ್ನು ನಮ್ಮ ಮುಂದಿನ ಪೀಳಿಗೆಗೂ ಹೆಮ್ಮೆಯಿಂದ ಹೇಳಿಕೊಡಬಹುದು ಎಂದು ಅವರು ಹೇಳಿದರು.
ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂಬುದು ಸ್ವಾತಂತ್ರ್ಯಪೂರ್ವದಿಂದಲೂ ಬೇಡಿಕೆಗಳು ಕೇಳಿ ಬಂದಿದ್ದವು. ಮೊಹಮದ್ ಅಲಿ ಜಿನ್ನಾ ಕೂಡ ಇದಕ್ಕಾಗಿ ಹೋರಾಟ ನಡೆಸಿದ್ದರು. ಎರಡೂ ದೇಶಗಳು ನಡೆದು ಬಂದ ದಾರಿಯನ್ನು ಗಮನಿಸಿ, ಭಾರತ ಜಾತ್ಯಾತೀತವಾಗಿದ್ದರೂ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಆದರೆ ಪಾಕಿಸ್ತಾನದಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂದು ಅವರು ಹೇಳಿದರು.
ಕಾಶ್ಮೀರ ಯಾವತ್ತಿದ್ದರೂ ಪಾಕಿಸ್ತಾನಕ್ಕೆ ಸೇರಬೇಕು. ಕಾಶ್ಮೀರದಿಂದ ಯಾವತ್ತೂ ಭಯೋತ್ಪಾದನೆ ಹೋಗಲಾಡಿಸಲು ಸಾಧ್ಯವಿಲ್ಲ. ಭಾರತಕ್ಕೆ ಉಗ್ರರನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಅದನ್ನು ಸಮರ್ಥವಾಗಿ ಹತ್ತಿಕ್ಕಲಾಗುತ್ತಿದೆ. ಆದರೆ ಕಾಶ್ಮೀರದ ವಿಷಯದಲ್ಲಿ ಭಾರತ ಸೋಲುತ್ತಿದೆ. ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಆಗದೇ ಪ್ರತ್ಯೇಕ ರಾಷ್ಟ್ರ ಮಾಡಲು ಇಷ್ಟವಿಲ್ಲದೇ ಪರಿತಪಿಸುತ್ತಿದೆ ಎಂದು ಅವರು ಲೇವಡಿ ಮಾಡಿದರು.