Menu

ಚಲಿಸುವ ರೈಲಿನಲ್ಲೂ ಎಟಿಎಂನಲ್ಲಿ ಹಣ ಡ್ರಾ ಮಾಡಬಹುದು!

ಮುಂಬೈ: ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವವವರು ಊಟ, ತಿಂಡಿ ಜೊತೆಗೆ ಬೇಕೆಂದಾಗ ಹಣವನ್ನೂ ಬಿಡಿಸಬಹುದು. ಹೌದು, ಇದಕ್ಕಾಗಿ ಭಾರತೀಯ ರೈಲ್ವೆಯು ಎಟಿಎಂ ಸೌಲಭ್ಯವನ್ನು ಪರಿಚಯಿಸಿದೆ.

ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಎಟಿಎಂ ಅಳವಡಿಸಲಾಗಿದೆ. ಇದು ದೇಶದ ಮೊದಲ ಎಟಿಎಂ ಸಹಿತ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಎಟಿಎಂ ಸ್ಥಾಪಿಸಲಾಗಿದ್ದು, ಇದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರೈಲು ಚಲಿಸುವಾಗಲೂ ಪ್ರಯಾಣಿಕರು ಹಣ ಡ್ರಾ ಮಾಡಬಹುದು.

ಭಾರತೀಯ ರೈಲ್ವೆಯ ನವೀನ ಮತ್ತು ಶುಲ್ಕೇತರ ಆದಾಯ ಕಲ್ಪನೆಗಳ ಯೋಜನೆಯ (ಐಎನ್‌ಎಫ್‌ಆರ್‌ಐಎಸ್) ಭಾಗವಾಗಿ ಈ ಎಟಿಎಂ ಸೌಲಭ್ಯವನ್ನು ಜಾರಿಗೆ ತರಲಾಗಿದೆ.ಪ್ರಯೋಗ ಯಶಸ್ವಿ: ಭಾರತೀಯ ರೈಲ್ವೆಯ ಭುಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ಸಹಯೋಗದೊಂದಿಗೆ ಈ ಎಟಿಎಂ ಸ್ಥಾಪಿಸಲಾಗಿದೆ. “ಪ್ರಯಾಣದ ಉದ್ದಕ್ಕೂ ಎಟಿಎಂ ಸುಗಮವಾಗಿ ಕಾರ್ಯನಿರ್ವಹಿಸಿದ್ದು, ಪ್ರಯೋಗವು ಯಶಸ್ವಿಯಾಗಿದೆ,” ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಇಗತ್ಪುರಿ ಮತ್ತು ಕಸರಾ ನಡುವಿನ ಮಾರ್ಗದಲ್ಲಿ ಸುರಂಗಗಳು ಮತ್ತು ಸೀಮಿತ ಮೊಬೈಲ್ ಸಂಪರ್ಕದಿಂದಾಗಿ ಕೆಲವು ಸಂದರ್ಭಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಕಂಡುಬಂದಿತು. ಎಟಿಎಂ ಎಸಿ ಬೋಗಿಯಲ್ಲಿದ್ದರೂ, ಪಂಚವಟಿ ಎಕ್ಸ್‌ಪ್ರೆಸ್‌ನ ಎಲ್ಲ 22 ಬೋಗಿಗಳ ಪ್ರಯಾಣಿಕರು ಇದನ್ನು ಬಳಸಬಹುದು. ಹಣ ಡ್ರಾ ಮಾಡುವುದರ ಜೊತೆಗೆ, ಪ್ರಯಾಣಿಕರು ಚೆಕ್ ಪುಸ್ತಕಗಳನ್ನು ಆರ್ಡರ್ ಮಾಡಲು ಮತ್ತು ಖಾತೆ ವಿವರಗಳನ್ನು ಪಡೆಯಲು ಎಟಿಎಂ ಬಳಸಬಹುದು.

ಸಿಸಿಟಿವಿ ಕಣ್ಗಾವಲು: ಎಟಿಎಂಗೆ ಶಟರ್ ಅಳವಡಿಸಲಾಗಿದ್ದು, 24 ಗಂಟೆಯೂ ಸಿಸಿಟಿವಿ ಕ್ಯಾಮೆರಾಗಳಿಂದ ಮೇಲ್ವಿಚಾರಣೆ ನಡೆಯುತ್ತದೆ. “ಈ ಸೌಲಭ್ಯವು ಪ್ರಯಾಣಿಕರಲ್ಲಿ ಜನಪ್ರಿಯವಾದರೆ, ಇದನ್ನು ಇತರ ರೈಲುಗಳಿಗೂ ವಿಸ್ತರಿಸಲಾಗುವುದು,” ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *