ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ ಆರೋಪಗಳು ಹಾಗೂ ನಾರಾಯಣಪುರ ಬಲದಂಡೆ ಸೀಳು ಕಾಲುವೆಗಳ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳ ಕುರಿತು ನಿವೃತ್ತ ನ್ಯಾ. ಹೆಚ್.ಎನ್ ನಾಗಮೋಹನ್ ದಾಸ್ ಆಯೋಗವು ನಡೆಸಿದ ತನಿಖೆಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಿವೃತ್ತ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. 40% ಕಮೀಷನ್ ಆರೋಪಕ್ಕೆ ಸಂಬಂಧಿಸಿದಂತೆ 20 ಸಾವಿರ ಪುಟಗಳ ವರದಿಗಳನ್ನು ಸಿಎಂಗೆ ಸಲ್ಲಿಕೆ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಕಾಮಗಾರಿಗಳಲ್ಲಿ ಶೇ.40 ಕಮಿಷನ್ ಇದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಆರೋಪಿಸಿತ್ತು. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು.
ಆರೋಪಗಳು ಕೇಳಿಬಂದ ಬೆನ್ನಲ್ಲೇ 26-7-2019 ರಿಂದ 31.03.2023ರ ವರೆಗೆ ನಡೆದಿರುವ ಕಾಮಗಾರಿಗಳ ಬಗ್ಗೆ ತನಿಖೆ ವರದಿ ಸಲ್ಲಿಕೆ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ರಾಂಡಮ್ ಮಾದರಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಆಯೋಗ ತನಿಖೆ ನಡೆಸಿತ್ತು. ಈ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳು, ಎಲ್ಲಾ ಮಾದರಿಯ ಕಾಮಗಾರಿಗಳು ಹಾಗೂ ಎಲ್ಲಾ ಮೊತ್ತದ ಕಾಮಗಾರಿಗಳನ್ನ ಪರಿಗಣಿಸಿ ಆಯೋಗ ತನಿಖೆ ನಡೆಸಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.