ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಬರೆದ ಬೆನ್ನಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮ ನಿವೃತ್ತಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಎಕ್ಸ್ ನಲ್ಲಿ ಸೋಮವಾರ ಪೋಸ್ಟ್ ಮಾಡಿರುವ ರೋಹಿತ್ ಶರ್ಮ, ನಾನು ಮತ್ತು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತಿಲ್ಲ. ಆ ಬಗ್ಗೆ ನಾವು ಯಾವುದೇ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಲವು ದಿನಗಳಿಂದ ನಮ್ಮ ವಿದಾಯದ ಬಗ್ಗೆ ವದಂತಿಗಳು ಹರಡುತ್ತಲೇ ಇವೆ. ಸದ್ಯಕ್ಕೆ ನಾವು ನಿವೃತ್ತಿ ಬಗ್ಗೆ ಯೋಚನೆ ಮಾಡಿಲ್ಲ. ಈಗ ಹೇಗೆ ನಡೆದುಕೊಂಡು ಹೋಗುತ್ತಿದೆಯೋ ಅದೇ ರೀತಿ ಮುಂದುವರಿಯುತ್ತದೆ. ಮುಂದೆ ನೋಡೋಣ ಎಂದು ರೋಹಿತ್ ಶರ್ಮ ಹೇಳಿದ್ದಾರೆ.
ರೋಹಿತ್ ಶರ್ಮ ಐಸಿಸಿ ಟೂರ್ನಿಯ ಫೈನಲ್ ನಲ್ಲಿ ಮೊದಲ ಬಾರಿ ಅರ್ಧಶತಕ ಬಾರಿಸಿದ ದಾಖಲೆ ಬರೆದರೆ, ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸಿ ಚೇಸಿಂಗ್ ಮಾಸ್ಟರ್ ಎಂದು ಮತ್ತೊಮ್ಮೆ ನಿರೂಪಿಸಿದ್ದರು.
ಭಾನುವಾರ ನಡೆದ ಫೈನಲ್ ನಲ್ಲಿ ಭಾರತ ತಂಡ ೪ ವಿಕೆಟ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತು. ಅಲ್ಲದೇ ರೋಹಿತ್ ಶರ್ಮ ಸಾರಥ್ಯದಲ್ಲಿ ಭಾರತ ತಂಡ ೨ ಐಸಿಸಿ ಕಪ್ ಗೆದ್ದ ದಾಖಲೆ ಬರೆಯಿತು.