ಚಿನ್ನ ಕಳ್ಳಸಾಗಾಣೆ ವೇಳೆ ಸಿಕ್ಕಿಬಿದ್ದ ನಟಿ ರನ್ಯಾ ರಾವ್ ಪ್ರಕರಣ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ಕುತೂಹಲದ ಚರ್ಚೆಗೆ ಕಾರಣವಾಯಿತು.
ಸೋಮವಾರ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ರನ್ಯಾ ಪ್ರಕರಣವನ್ನು ಪ್ರಸ್ತಾಪಿಸಿದ್ದು, ಈ ಪ್ರಕರಣದ ಹಿಂದೆ ದೊಡ್ಡ ಹವಾಲಾ, ಮಾಫಿಯಾ ಕೆಲಸ ಮಾಡುತ್ತಿದೆ. ಈ ಪ್ರಕರಣದಲ್ಲಿ ಸಚಿವರು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೂ ಇದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆರೋಪಿಸಿದರು.
ಇಂತಹ ಮಾಫಿಯಾಗಳನ್ನು ಸರ್ಕಾರ ಮಟ್ಟ ಹಾಕಬೇಕು. ಪೊಲೀಸರೇ ಪ್ರೊಟೋಕಾಲ್ ಮುರಿದು ಸಹಕರಿಸುತ್ತಿದ್ದರು ಎಂಬ ಆರೋಪವಿದೆ. ಈ ಬಗ್ಗೆ ಗೃಹ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಡಿಆರ್ ಓ ಅಧಿಕಾರಿಗಳು ಪ್ರಕರಣವನ್ನು ಭೇದಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸರು ಪ್ರೊಟೊಕಾಲ್ ತಪ್ಪಿಸಿರುವ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ ಎಂದರು.
ಪ್ರಕರಣದಲ್ಲಿ ಸಚಿವರು, ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ತನಿಖೆ ನಡೆದು ಮಾಹಿತಿ ಬರಲಿ ನೋಡೋಣ. ಆದರೆ ಸಿಬಿಐ ಪ್ರಕರಣದ ಕುರಿತು ನಮಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಗೃಹ ಸಚಿವರಾಗಿ ಸಿಬಿಐ ಪ್ರಕರಣ ದಾಖಲಿಸಿಕೊಂಡ ವಿವರ ತಿಳಿದಿಲ್ಲ ಅಂದರೆ ಹೇಗೆ? ನೀವೇ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಸುನೀಲ್ ಕುಮಾರ್ ಆಗ್ರಹಿಸಿದರು.
ಪ್ರಕರಣ ತನಿಖಾ ಹಂತದಲ್ಲಿದೆ. ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ಮುಗಿದ ನಂತರ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.