ಸಕಲೇಶಪುರದ ವಳಲಹಳ್ಳಿ ಕೂಡಿಗೆಯ ಲಾಡ್ಜ್ವೊಂದರಲ್ಲಿ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವತಿಯನ್ನು ಬೆಂಗಳೂರು ನಾಗಸಂದ್ರ ನಿವಾಸಿ ೨೫ ಹರೆಯದ ವರ್ಷಾ ಎಂದು ಗುರುತಿಸಲಾಗಿದೆ.
ಆಕೆ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಜೊತೆ ಟ್ರಿಪ್ಗೆಂದು ಬಂದಿದ್ದಳು. ಮೂವರೂ ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಫಾಲ್ಸ್ ಸೇರಿದಂತೆ ಹಲವೆಡೆ ಸುತ್ತಾಡಿದ್ದರು. ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್ನ ಒಂದೇ ರೂಂನಲ್ಲಿ ತಂಗಿದ್ದರು.
ಮಂಗಳವಾರ ಲಾಡ್ಜ್ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷಾ ಮೃತಪಟ್ಟಿದ್ದಾಳೆ. ರಘು ಹಾಗೂ ದರ್ಶನ್ ಆಕೆಯನ್ನು ಸಕಲೇಶಪುರ ತಾಲೂಕು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಮೃತಪಟ್ಟ ಕುರಿತು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಹಿಟ್ ಅಂಡ್ ರನ್ಗೆ ನವದಂಪತಿ ಬಲಿ
ಶಿರಾ ತಾಲೂಕಿನ ದ್ವಾರಾಳು ಸೇತುವೆ ಮೇಲೆ ಹಿಟ್ ಅಂಡ್ ರನ್ಗೆ ನವ ದಂಪತಿ ಬಲಿಯಾಗಿದ್ದಾರೆ. ದರ್ಶನ್ (25), ಉಷಾರಾಣಿ (21) ಮೃತ ದಂಪತಿ. ಶಿರಾ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಇವರಿಗೆ ಒಂದುವರೆ ತಿಂಗಳ ಹಿಂದೆ ಮದುವೆ ಆಗಿತ್ತು.
ಬೈಕ್ನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ದರ್ಶನ್ ಸ್ಥಳದಲ್ಲೇ ಮೃತಪಟ್ಟರೆ, ಉಷಾರಾಣಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸು ನೀಗಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


