Tuesday, September 15, 2026
Menu

ರಾಜ್ಯದಲ್ಲಿ ಗಣಿಗಾರಿಕೆ ಬ್ಲಾಕ್‌ ಹರಾಜು ನಡೆಸಲು ಸುಪ್ರೀಂ ಸಮ್ಮತಿ

supreme court

ರಾಜ್ಯದ ಕಚ್ಚಾ ಅರಣ್ಯ ಪ್ರದೇಶ ಸೇರಿದಂತೆ ವಿವಿಧ ಗಣಿಗಾರಿಕೆ ಬ್ಲಾಕ್‌ಗಳನ್ನು ಒಂದೇ ಸಮಗ್ರ ಬ್ಲಾಕ್‌ಗಳಾಗಿ ವಿಲೀನಗೊಳಿಸಿ ಹರಾಜು ನಡೆಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ.

ಅರಣ್ಯ ಪ್ರದೇಶವನ್ನು ಹರಾಜು ಬ್ಲಾಕ್‌ಗೆ ಸೇರಿಸಿರುವುದನ್ನೇ ಗಣಿಗಾರಿಕೆಗೆ ಅನುಮತಿ ಎಂದು ಪರಿಗಣಿಸಲಾಗುವುದಿಲ್ಲ ಎಂಬುದಾಗಿಯೂ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ಸ್ಪಷ್ಟವಾಗಿ ಹೇಳಿದೆ.

ಗಣಿಗಾರಿಕೆ ಪ್ರದೇಶಗಳನ್ನು ದೊಡ್ಡ ಮತ್ತು ಸಮಗ್ರ ಬ್ಲಾಕ್‌ಗಳಾಗಿ ರೂಪಿಸುವುದು ಕಾರ್ಯಾಚರಣೆಯನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯ ಭಾಗವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಈಗಾಗಲೇ ನ್ಯಾಯಾಲಯ ವಿಧಿಸಿರುವ ಪರಿಸರ ಮತ್ತು ಇತರ ಸುರಕ್ಷತಾ ಕ್ರಮಗಳು ದುರ್ಬಲಗೊಳ್ಳಬಾರದು ಎಂದು ನ್ಯಾಯಾಲಯವು ಹೇಳಿದೆ.

ಕಚ್ಚಾ ಅರಣ್ಯ ಅಥವಾ ನೈಸರ್ಗಿಕ ಅರಣ್ಯ ಪ್ರದೇಶವನ್ನು ಹರಾಜು ಬ್ಲಾಕ್‌ಗೆ ಸೇರಿಸಿದರೂ ಅಲ್ಲಿ ಗಣಿಗಾರಿಕೆ ನಡೆಸಲು ಸ್ವಯಂಚಾಲಿತ ಅನುಮತಿ ದೊರೆಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸುವ ಮೊದಲು ಅರಣ್ಯ ಸಂರಕ್ಷಣೆ ಕಾಯ್ದೆ, 1980 ಅಡಿಅಗತ್ಯವಿರುವ ಪೂರ್ವಾನುಮತಿ ಸೇರಿದಂತೆ ಎಲ್ಲಾ ಕಾನೂನುಬದ್ಧ ಅನುಮತಿಗಳನ್ನು ಪಡೆಯುವುದು ಕಡ್ಡಾಯ ಎಂದಿದೆ.

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅತಿಕ್ರಮಣದ ಪ್ರಮಾಣದ ಆಧಾರದ ಮೇಲೆ ಗಣಿಗಾರಿಕೆ ಗುತ್ತಿಗೆಗಳನ್ನು ಹಲವು ವರ್ಷಗಳ ಹಿಂದೆ ಎ, ಬಿ ಮತ್ತು ಸಿ ವರ್ಗಗಳಾಗಿ ವಿಂಗಡಿಸಲಾಗಿತ್ತು. ಈಗ ವಿಭಿನ್ನ ವರ್ಗಗಳ ಗಣಿಗಾರಿಕೆ ಬ್ಲಾಕ್‌ಗಳನ್ನು ಅಗತ್ಯವಿದ್ದಲ್ಲಿ ಕಚ್ಚಾ ಅರಣ್ಯ ಪ್ರದೇಶದೊಂದಿಗೆ ಸೇರಿಸಿ, ದೊಡ್ಡ ಸಮಗ್ರ ಬ್ಲಾಕ್‌ಗಳಾಗಿ ಹರಾಜು ಮಾಡಲು ನ್ಯಾಯಾಲಯ ಅವಕಾಶ ನೀಡಿದೆ. ಬ್ಲಾಕ್‌ಗಳ ವಿಲೀನದಿಂದ ಹರಾಜು ಪ್ರಕ್ರಿಯೆ ಸರಳವಾಗಬಹುದು. ಈ ಪ್ರಕ್ರಿಯೆಯ ನೆಪದಲ್ಲಿ ಸುಪ್ರೀಂಕೋರ್ಟ್ ಹಲವು ವರ್ಷಗಳಿಂದ ವಿಧಿಸಿರುವ ಪರಿಸರ ಸುರಕ್ಷತಾ ಕ್ರಮಗಳು ಯಾವುದೇ ರೀತಿ ದುರ್ಬಲಗೊಳ್ಳಬಾರದು ಎಂದು ಪೀಠ ಒತ್ತಿಹೇಳಿದೆ.

Related Posts

Leave a Reply

Your email address will not be published. Required fields are marked *