ಚಿಕ್ಕಮ್ಮ ಮತ್ತು ಮಗ ಹೊಂದಿದ್ದ ಅಕ್ರಮ ಸಂಬಂಧ ಬಯಲಾಗುತ್ತಲೇ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಚಿತ್ತಾಪುರ ತಾಲೂಕಿನ ಸಂಕನೂರು ಬೆಟ್ಟದಲ್ಲಿ ಮಹಿಳೆ ಮತ್ತು ಆಕೆಯ ಅಕ್ಕನ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇವರಿಬ್ಬರು ಪರಸ್ಪರ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಸಂಕನೂರು ಗ್ರಾಮದ ಹೊರವಲಯದಲ್ಲಿರುವ ಬೆಟ್ಟ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಇಬ್ಬರೂ ಒಂದೇ ಮರಕ್ಕೆ ಒಂದೇ ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾರೆ.
ಯಾದಗಿರಿ ಬಾಚವಾರ ಗ್ರಾಮದ 23 ವರ್ಷದ ಬಸವರಾಜ್ ಹಾಗೂ ಚಿತ್ತಾಪುರ ಪಟ್ಟಣದ ಬಸವನಗರ ನಿವಾಸಿ 32 ವರ್ಷದ ಶರಣಮ್ಮ ಭೀಮನಹಳ್ಳಿ ಆತ್ಮಹತ್ಯೆ ಮಾಡಿಕೊಂಡವರು. ಬಸವರಾಜ್ ಅವಿವಾಹಿತ, ಶರಣಮ್ಮಳಿಗೆ 12 ವರ್ಷಗಳ ಹಿಂದೆ ಮದುವೆಯಾಗಿದೆ. ಆಕೆಗೆ ಹೆಣ್ಣು ಮಗು ಇದೆ.
ಶರಣಮ್ಮ ತನ್ನ ಅಕ್ಕನ ಮಗ ಬಸವರಾಜನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ವಿಚಾರ ತಿಳಿದ ಗಂಡ ಬುದ್ಧಿ ಹೇಳಿದ್ದ. ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಬಸವರಾಜನ ಜೊತೆ ಬೈಕ್ ಹತ್ತಿ ಹೋಗಿದ್ದಾಕೆ ಆತನೊಂದಿಗೆ ಹೆಣವಾಗಿ ಪತ್ತೆಯಾಗಿದ್ದಾಳೆ. ಚಿತ್ತಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.


