ದೇಶದಲ್ಲಿರುವ ಎಲ್ಲ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನೂ ನೀಡಬೇಕು ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಡೆದ ‘ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನಜಾಗೃತಿ ಸಮಾವೇಶ’ ದಲ್ಲಿ ಅವರು ಮಾತನಾಡಿದರು.
ದೇಶಾದ್ಯಂತ ಹಿಂದುಳಿದ ವರ್ಗಗಳ ಜನ ಸಂಖ್ಯೆ 65 ಕೋಟಿಗೂ ಹೆಚ್ಚಾಗಿದೆ. ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 50ರಷ್ಟಾಗಿದೆ. ಜನಸಂಖ್ಯಾ ಪ್ರಮಾಣವನ್ನು ಆಧರಿಸಿ ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗಿರುವ ರಾಜಕೀಯ ಪ್ರಾತಿನಿಧ್ಯವನ್ನು ವಿಧಾನ ಸಭೆ ಮತ್ತು ಲೋಕಸಭೆಗಳಿಗೂ ವಿಸ್ತರಿಸಬೇಕು ಎಂದು ಸಂತೋಷ್ ಲಾಡ್ ಹೇಳಿದರು.
ಭಾರತದ ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಹಿಂದುಳಿದ ವರ್ಗಗಳ ಜನಸಂಖ್ಯೆ ಇದೆ ಎಂಬುದನ್ನು ಪ್ರಸ್ತಾಪಿಸಿದ ಲಾಡ್ ಅವರು, ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಸಿಕ್ಕಾಗ ಮಾತ್ರ ನಿಜವಾದ ಕಲ್ಯಾಣ ಸಾಧ್ಯ ಎಂಬುದನ್ನು ಒತ್ತಿ ಹೇಳಿದರು.
ಸಂತೋಷ್ ಲಾಡ್ ಭಾಷಣಕ್ಕೆ ಕಾರ್ಯಕ್ರಮದಲ್ಲಿ ಸೇರಿದ್ದ ಸಾವಿರಾರು ಜನರು ಚಪ್ಪಾಳೆ ಶಿಳ್ಳೆ ಹೊಡೆಯುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ತಮ್ಮ ಭಾಷಣದುದ್ದಕ್ಕೂ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಮಹಾತ್ಮ ಜ್ಯೋತಿಬಾ ಫುಲೆ, ಛತ್ರಪತಿ ಶಾಹೂ ಮಹಾರಾಜ್, ಗಾಯಕ್ವಾಡ್ ಮಹಾರಾಜರು ಹಾಗೂ ವಿಶೇಷವಾಗಿ ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರ್ ಅವರು ಸೇರಿದಂತೆ ಹಲವು ಮೇಧಾವಿಗಳು ನಡೆಸಿದ ಸತತ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದ ಸಂತೋಷ್ ಲಾಡ್ “Reservation is a constitutional weapon of social justice, not charity, not a poverty alleviation scheme” ಎಂಬ ಅಂಬೇಡ್ಕರ್ ಅವರ ನುಡಿಯನ್ನು ಉಲ್ಲೇಖಿಸಿದರು.


