ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಳೆದ 45 ದಿನಗಳಲ್ಲಿ ಸುಮಾರು 4 ಲಕ್ಷ ಕೋಳಿಗಳು ಮೃತಪಟ್ಟಿದ್ದು ಹಕ್ಕಿಜ್ವರದ ಅನುಮಾನ ಕಾಡಲಾರಂಭಿಸಿದೆ.
ಕೋಳಿಗಳ ಈ ಹಠಾತ್ ಸಾವಿನ ಕಾರಣ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯು, ಸತ್ತ ಕೋಳಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದೆ.
ಭೋಪಾಲ್ ಹಾಗೂ ವಿಜಯವಾಡದ ಪ್ರಯೋಗಾಲಯಕ್ಕೆ ಮಾದರಿಯನ್ನು ರವಾನಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ನಿರ್ದೇಶಕ ದಾಮೋದರ್ ನಾಯ್ಡು ಹೇಳಿದ್ದಾರೆ.
’ಸಾವು ಸಂಭವಿಸುತ್ತಿದೆಯಾದರೂ, ಅಷ್ಟೇನು ವ್ಯಾಪಕವಾಗಿಲ್ಲ ಎಂದು ರೈತರು ಹೇಳಿದ್ದಾರೆ. ಸುರಕ್ಷತಾ ಮಾನದಂಡಗಳನ್ನು ಜನರು ನಿರ್ಲಕ್ಷಿಸಿರುವುದು ರೋಗ ಹರಡುವಿಕೆಗೆ ಮುಖ್ಯ ಕಾರಣವಾಗಿದೆ’ ಎಂದು ನಾಯ್ಡು ಪಿಟಿಐಗೆ ತಿಳಿಸಿದ್ದಾರೆ.
ಕೆಲವರು ಸತ್ತ ಕೋಳಿಗಳನ್ನು ಕಾಲುವೆಗಳು, ರಸ್ತೆ ಬದಿಯಲ್ಲಿ ಕಸಹಾಕುವ ಸ್ಥಳಗಳಲ್ಲಿ ಬಿಸಾಡುತ್ತಿದ್ದಾರೆ. ಇದು, ಸೋಂಕು ಹರಡಲು ಕಾರಣವಾಗಿದೆ ಎಂದಿರುವ ನಾಯ್ಡು, ಕೈಗೊಳ್ಳಬಹುದಾದ ಕನಿಷ್ಠ ಮುಂಜಾಗ್ರತೆಯನ್ನು ಕಡೆಗಣಿಸಲಾಗಿದೆ. ಇದರಿಂದ, ಸಾವು ಸಂಭವಿಸುತ್ತಿದೆ. ಪ್ರತಿವರ್ಷವೂ ಈ ರೀತಿ ಆಗುತ್ತಿರುತ್ತದೆ. ಆದರೆ, ವಲಸೆ ಪಕ್ಷಿಗಳ ಸಂಖ್ಯೆ ಏರಿಕೆಯಾಗಿರುವುದನ್ನು ಸಾಕಣೆದಾರರು ನಿರ್ಲಕ್ಷಿಸಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗಿದೆ ಎಂದು ವಿವರಿಸಿದ್ದಾರೆ.
ಮುನ್ನೆಚ್ಚರಿಕೆಯ ಬಗ್ಗೆ ಸಾಕಣೆದಾರರು, ರೈತರಲ್ಲಿ ಅರಿವು ಮೂಡಿಸುವ ಸಲುವಾಗಿ ಸರಣಿ ಸಭೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳುವ ಕುರಿತು ರೈತರಿಗೆ ಸಲಹೆ ನೀಡಲು, ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಳಿಗಳು ಭಾರಿ ಸಂಖ್ಯೆಯಲ್ಲಿ ಮೃತಪಟ್ಟಿರುವುದಕ್ಕೆ ಹಕ್ಕಿ ಜ್ವರ ಕಾರಣವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ಪ್ರಯೋಗಾಲಯದಲ್ಲಿ ಖಚಿತವಾಗಬೇಕಿದೆ.
ಜಿಲ್ಲೆಯಲ್ಲಿರುವ ಪೌಲ್ಟ್ರಿ ಫಾರ್ಮ್‌ಗಳಲ್ಲಿ ಸುಮಾರು ೮ ಕೋಟಿ ಕೋಳಿಗಳಿವೆ. ೨ ಕೋಟಿಯಷ್ಟು ಕೋಳಿಗಳನ್ನು ಜನರು ತಮ್ಮ ಮನೆಗಳಲ್ಲಿ ಸಾಕಿದ್ದಾರೆ ಎಂದು ಇಲಾಖೆ ಅಂದಾಜಿಸಿದೆ.