Saturday, September 05, 2026
Menu

ಕೂಡ್ಲಿಗಿಯಲ್ಲಿ ಪ್ರಜಾಸೇವಾ ಆಂದೋಲನ: ಕೌಂಟರ್‌ಗಳಿಗೆ ತೆರಳಿ ಖುದ್ದು ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ

ರಾಜ್ಯ ಮಟ್ಟದ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕೂಡ್ಲಿಗಿಯಲ್ಲಿ ವಿಜಯನಗರ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕರ ಅಹವಾಲುಗಳನ್ನು ಆಲಿಸುವುದರ ಜೊತೆಗೆ ವಿವಿಧ ಇಲಾಖೆಗಳ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಸಾಧನೆಗಳನ್ನು ಪರಿಚಯಿಸುವ ಉದ್ದೇಶದಿಂದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಸಾರ್ವಜನಿಕರು ತಮ್ಮ ಅಹವಾಲು, ಕುಂದುಕೊರತೆಗಳನ್ನು ಸಲ್ಲಿಸಲು ಜಿಲ್ಲಾಡಳಿತ ವ್ಯವಸ್ಥೆಗೊಳಿಸಿದ್ದ ಮಳಿಗೆಗಳು ಹಾಗೂ ಕೌಂಟರ್‌ಗಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಖುದ್ದಾಗಿ ಭೇಟಿ ನೀಡಿ,  ಅಹವಾಲುಗಳನ್ನು ಸ್ವೀಕರಿಸಿದರು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ  ಪ್ರಜಾಸೇವಾ ವ್ಯವಸ್ಥೆಯ ಮೂಲಕ ಸ್ಪಂದಿಸಿ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.

ಕೂಡ್ಲಿಗಿ ತಾಲೂಕಿನ ಗುಡೇಕೋಟೆ, ಅಯ್ಯಪ್ಪನಹಳ್ಳಿ, ರಾಮದುರ್ಗ, ಹಿರೇಕುಂಬಳಕುಂಟೆ, ಹೊಸಹಳ್ಳಿ, ಸೂಲದಹಳ್ಳಿ, ಶಿವಪುರ, ಹೀರೆಹೆಗ್ಡಾಳ್, ಬೆಳ್ಳಗಟ್ಟ, ಕಕ್ಕುಪ್ಪಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಒಟ್ಟು 30 ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಜಿಲ್ಲೆಯ ಇತರೆ ತಾಲೂಕುಗಳ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಲ್ಲಿಸಲು ಜಿಲ್ಲಾಡಳಿತದ ವತಿಯಿಂದ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆಯೊಂದಿಗೆ ನೂರಾರು ಸಾರ್ವಜನಿಕರು ಕೌಂಟರ್‌ಗಳಿಗೆ ಆಗಮಿಸಿ ಅಹವಾಲು ಸಲ್ಲಿಸಿದರು.

ಇಲಾಖೆಗಳ ಯೋಜನೆ ಮತ್ತು ಕಾರ್ಯಕ್ರಮಗಳ ವಸ್ತು ಪ್ರದರ್ಶನ ಹಾಗೂ ಮಾಹಿತಿ ಮಳಿಗೆಗಳಿದ್ದವು.  ಸರ್ಕಾರದ ಯೋಜನೆಗಳು ಕೇವಲ ಕಚೇರಿ ಕಡತಗಳಿಗೆ ಸೀಮಿತವಾಗದೆ, ಅವುಗಳ ಪ್ರಯೋಜನಗಳು ಜನಸಾಮಾನ್ಯರಿಗೆ ಹೇಗೆ ತಲುಪುತ್ತಿವೆ ಎಂಬುದನ್ನು ಮಳಿಗೆಗಳ ಮೂಲಕ ಮನದಟ್ಟಾಗಿಸುವ ಪ್ರಯತ್ನ ಸಾರ್ವಜನಿಕರ ಗಮನ ಸೆಳೆಯಿತು.

ಅಂಗವಿಕಲರ ಹಾಗೂ ವಿಶೇಷಚೇತನರ ಕಲ್ಯಾಣ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ 10 ವೀಲ್‌ಚೇರ್, 3 ಬ್ಯಾಟರಿ ಚಾಲಿತ ವೀಲ್‌ಚೇರ್, 2 ಹೊಲಿಗೆ ಯಂತ್ರಗಳು ಹಾಗೂ ಅಂಧರಿಗೆ 3 ಟಾಕಿಂಗ್ ಲ್ಯಾಪ್‌ಟಾಪ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ  ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಮಳಿಗೆ ಸ್ಥಾಪಿಸಲಾಗಿತ್ತು. ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ವಿಧಾನ, ಸಾಲ ಸೌಲಭ್ಯಗಳು, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಸ್ವಸಹಾಯ ಗುಂಪುಗಳ ಸದಸ್ಯರು ತಯಾರಿಸಿದ ಸಿಹಿ ತಿನಿಸುಗಳು, ವಿವಿಧ ಬಗೆಯ ಖಾದ್ಯಗಳು, ಕೈ ಕಸೂತಿ ವಸ್ತುಗಳು, ಆಟಿಕೆ ಗೊಂಬೆಗಳು ಸೇರಿದಂತೆ ಹಲವು ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳು ನೋಡುಗರ ಗಮನ ಸೆಳೆದವು. ಗ್ರಾಮೀಣ ಮಹಿಳೆಯರ ಕೌಶಲ್ಯ, ಸೃಜನಶೀಲತೆ ಹಾಗೂ ಸ್ವಾವಲಂಬನೆಯ ಬದುಕಿಗೆ ಇವು ಸಾಕ್ಷಿಯಾದವು.

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ರೈತರಿಗೆ ಜಾನುವಾರುಗಳ ಸಾಕಣೆ,  ಆರೋಗ್ಯ ಸಂರಕ್ಷಣೆ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಮಳಿಗೆ ಸ್ಥಾಪಿಸಲಾಗಿತ್ತು. ಅರಣ್ಯ ಇಲಾಖೆಯ ಮಳಿಗೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ನೈಜ ಚಿತ್ರಣದ ಮೂಲಕ ಮನದಟ್ಟಾಗಿಸುವ ಪ್ರಯತ್ನ ಯಶಸ್ವಿಯಾಗಿತ್ತು.

ರೇಷ್ಮೆ ಹಾಗೂ ಕೃಷಿ ಇಲಾಖೆಗಳ ಮಳಿಗೆಗಳು ವಿಶೇಷ ಆಕರ್ಷಣೆಯಾಗಿದ್ದವು. ವಿಶೇಷವಾಗಿ ರೇಷ್ಮೆ ಹುಳುವಿನ ವಿವಿಧ ಹಂತಗಳನ್ನು ನೇರವಾಗಿ ಪ್ರದರ್ಶನಕ್ಕಿಟ್ಟಿದ್ದು, ರೇಷ್ಮೆ ಉತ್ಪಾದನೆಯ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸಿತು.

ತೋಟಗಾರಿಕೆ ಇಲಾಖೆ ವತಿಯಿಂದ ಸ್ಥಾಪಿಸಲಾಗಿದ್ದ ಮಾಹಿತಿ ಮತ್ತು ವಸ್ತು ಪ್ರದರ್ಶನ ಮಳಿಗೆಯೂ ಜನರ ಗಮನ ಸೆಳೆಯಿತು. ವಿವಿಧ ಹೂವು, ಹಣ್ಣು, ತರಕಾರಿ ಹಾಗೂ ತೋಟಗಾರಿಕೆ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು. ಚೆಂಡು ಹೂ ಹಾಗೂ ಗುಲಾಬಿ ಹೂವುಗಳಿಂದ ರೂಪಿಸಲಾಗಿದ್ದ ಕರ್ನಾಟಕದ ಭೂಪಟ ಹಾಗೂ ವೀರವನಿತೆ ಒನಕೆ ಓಬವ್ವಳ ಚಿತ್ರ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಕುರಿತು ಮಾಹಿತಿ ನೀಡಲು ಪ್ರತ್ಯೇಕ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಯೋಜನೆಗಳ ಅರ್ಹತೆ, ಸೌಲಭ್ಯ ಪಡೆಯುವ ವಿಧಾನ ಹಾಗೂ ಫಲಾನುಭವಿಗಳಿಗೆ ದೊರೆಯುವ ಪ್ರಯೋಜನಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಪ್ರಜಾಸೇವಾ ಅಭಿಯಾನವು ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಸೀಮಿತವಾಗದೆ, ಸರ್ಕಾರದ ಯೋಜನೆಗಳು, ಇಲಾಖೆಗಳ ಸೇವೆಗಳು, ಗ್ರಾಮೀಣ ಉತ್ಪನ್ನಗಳು ಹಾಗೂ ಫಲಾನುಭವಿಗಳ ಸಾಧನೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಸಮಗ್ರ ಜನಸೇವಾ ಕಾರ್ಯಕ್ರಮವಾಗಿ ಗಮನ ಸೆಳೆಯಿತು.

Related Posts

Leave a Reply

Your email address will not be published. Required fields are marked *