Saturday, September 05, 2026
Menu

ಬರ ನಿಖರ ಮಾಹಿತಿ ಕೊಡಿ, ಬೆಳೆವಿಮೆ ಅಕ್ರಮ, ಮೀಟರ್ ಬಡ್ಡಿ, ರೌಡಿ ನಿಗ್ರಹಕ್ಕೆ ಮುಂದಾಗಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಳೆ ವಿಮೆ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ದೂರುಗಳು ಬಂದಿವೆ. ಏಜೆಂಟ್ ಗಳು ರೈತರ ದಾರಿ ತಪ್ಪಿಸುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಕೆಲವು ಫೈನಾನ್ಸ್ ಕಂಪೆನಿಗಳ ಮೀಟರ್ ಬಡ್ಡಿ ದಂಧೆಯನ್ನು ನಿಲ್ಲಿಸಲು ಪೊಲೀಸರು ಮುಂದಾಗಬೇಕು. ಅಮಾಯಕರು ಈ ಜಾಲಕ್ಕೆ ಸಿಲುಕಿಕೊಳ್ಳದಂತೆ ನಿಗಾ ವಹಿಸಬೇಕು.  ಪೊಲೀಸ್ ವರಿಷ್ಠಾಧಿಕಾರಿಗಳು ರೌಡಿಗಳ ಪೆರೇಡ್ ಮಾಡಿ ಎಚ್ಚರಿಕೆ ನೀಡಬೇಕು. ಹಳ್ಳಿ, ನಗರಗಳು ಶಾಂತಿಯಿಂದ ಇರಬೇಕು. ಪುಂಡರ ಹಾವಳಿಗೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬರ ಪರಿಶೀಲನಾ ಸಭೆ ಉದ್ದೇಶಿಸಿ ಶಿವಕುಮಾರ್ ಮಾತನಾಡಿದರು.ದೇಶದಲ್ಲೇ ಅತಿ ಹೆಚ್ಚು ಒಣ ಭೂಮಿ ಇರುವ ಎರಡನೇ ರಾಜ್ಯ ನಮ್ಮದು. ಬರ ಪ್ರಕೃತಿ ನಿಯಮ.  ಪ್ರಕೃತಿ ಒಡ್ಡಿರುವ ಪರೀಕ್ಷೆ. ಈ ಪರೀಕ್ಷೆಯಲ್ಲಿ   ನಾವೆಲ್ಲರೂ ಪಾಸ್ ಆಗಬೇಕು. ಬರ ಪರಿಸ್ಥಿತಿ ಬಾಗಲಕೋಟೆ ಜಿಲ್ಲೆಯ ಸಾಕಷ್ಟು ಕಡೆ ಆವರಿಸಿದೆ. ಗದಗ ಜಿಲ್ಲೆಯಲ್ಲಿ ಒಂದು ತಾಲೂಕನ್ನು ಮಾತ್ರ ಬರ ಎಂದು ಘೋಷಣೆ ಮಾಡಲಾಗಿದೆ.ಆ ಜಿಲ್ಲೆಯ 6 ತಾಲೂಕುಗಳ ಪರಿಸ್ಥಿತಿ ಬಾಗಲಕೋಟೆಗಿಂತ ಭೀಕರವಾಗಿದೆ. ಇಲ್ಲಿ ಅರ್ಧ ಹಸಿರಿದೆ ಇನ್ನರ್ಧ ಇಲ್ಲ. ಈ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಹೇಗೆ ಮನವರಿಕೆ ಮಾಡಿಕೊಡಬೇಕು ಎಂದು ಆಲೋಚಿಸಲಾಗುವುದು ,ರೈತರಿಗೆ ಪರಿಹಾರ ಹೇಗೆ ನೀಡಬೇಕು ಎಂದು ಎಲ್ಲರೂ ಸೇರಿ ಸಮಾಲೋಚಿಸಬೇಕು ಎಂದರು.

ಅಧಿಕಾರಿಗಳು ಕಚೇರಿಯಿಂದ ಹೊರಗೆ ಬರಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಈಗಾಗಲೇ ಪ್ರತಿ ಕ್ಷೇತ್ರಗಳಿಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮಾಡಲು ಒಂದು ಕೋಟಿ ರೂ. ನೀಡಲಾಗಿದೆ. ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿರುವ ಹಣ ಸರಿಯಾಗಿ ಬಳಸಿಕೊಳ್ಳಬೇಕು. ಜಿಲ್ಲಾಧಿಕಾರಿ ಸಿಇಒ ಹಾಗೂ ಅಧಿಕಾರಿಗಳು ಕ್ಷೇತ್ರ ವೀಕ್ಷಣೆ ಮಾಡಬೇಕು ಎಂದು ಸೂಚಿಸಿದರು.

ವಿರೋಧ ಪಕ್ಷದವರು ಸದನದಲ್ಲಿ ರಾಜಕೀಯ ಮಾಡಿ ಸಮಯ ಹಾಳು ಮಾಡಿದರು. ರೈತರ ಸಮಸ್ಯೆ ಬಗೆಹರಿಸಲು ವಿಶೇಷ ಅಧಿವೇಶನ ನಡೆಸುವೆ. ಶಾಸಕರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ಕೇಂದ್ರ ತಂಡ ಬಂದಾಗ ಅವರಿಗೆ ಅಧಿಕಾರಿಗಳು ಸುಳ್ಳು ಹೇಳಬಾರದು.‌ ವಾಸ್ತವ ಹೇಳಿ ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು.

ಮೇವು ಕಿಟ್ ನೀಡಿ. ತಾಲೂಕು, ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು ಜನರನ್ನು ತಲುಪಬೇಕು‌. ಜಿಲ್ಲಾ ಕೇಂದ್ರದಲ್ಲೇ ಅಧಿಕಾರಿಗಳು ವಾಸ್ತವ್ಯ ಹೂಡಬೇಕು.  ರೈತರಿಗೆ ಗೌರವದಿಂದ ಸ್ಪಂದಿಸಿ ಕೆಲಸಗಳ ಬಗ್ಗೆ ಮನವರಿಗೆ ಮಾಡಿಕೊಡಬೇಕು. ಮುಂಬರುವ 10 ನೇ ತಾರೀಕು  ಅನೇಕ ಜನಪರ ಯೋಜನೆಗಳನ್ನು ಘೋಷಣೆ ಮಾಡಲಾಗುವುದು. ಅಧಿಕಾರಿಗಳು ಜನರ ಅರ್ಜಿಗಳಿಗೆ ಕಾನುನು ಪ್ರಕಾರವೇ ಪರಿಹಾರ ನೀಡಿ. ಅಕಸ್ಮಾತ್ ಏಕೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ತಾಳ್ಮೆಯಿಂದ ಮನವರಿಕೆ ಮಾಡಿಕೊಡಬೇಕು. ಪರಿಹಾರವಿದ್ದರೆ ತಿಳಿಸಬೇಕು ಎಂದರು.

ಯುಕೆಪಿ ಪರಿಹಾರ ನೀಡಲು ಎಲ್ಲಿ ಹಣವಿದೆ ಎಂದು ಜರಡಿಯಾಡುತ್ತಿದ್ದೇನೆ. ಬೆಳೆ ವಿಮೆ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ದೂರುಗಳು ಬಂದಿವೆ. ಏಜೆಂಟ್ ಗಳು ರೈತರ ದಾರಿ ತಪ್ಪಿಸುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಕೆಲವು ಫೈನಾನ್ಸ್ ಕಂಪೆನಿಗಳ ಮೀಟರ್ ಬಡ್ಡಿ ದಂಧೆಯನ್ನು ನಿಲ್ಲಿಸಲು ಪೊಲೀಸರು ಮುಂದಾಗಬೇಕು. ಅಮಾಯಕರು ಈ ಜಾಲಕ್ಕೆ ಸಿಲುಕಿಕೊಳ್ಳದಂತೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.

ಫಲಾನುಭವಿಗೆ ಬರ ಪರಿಹಾರ ನೀಡುವಾಗ ಪಾರದರ್ಶಕತೆ ಇರಬೇಕು. ಯಾವುದೇ ಅಕ್ರಮವಾದರೂಅಧಿಕಾರಿಗಳೇ ಹೊಣೆ. ಕಾಮಗಾರಿಗಳಲ್ಲಿ ಡಬಲ್ ಬಿಲ್ ಮಾಡಿದರೆ ಸಹಿಸುವುದಿಲ್ಲ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಕಾನೂನು ಪ್ರಕಾರ ಮಾಡಬೇಕು. ಬಾಗಲಕೋಟೆ ಜಿಲ್ಲೆಯ ಅಧಿಕಾರಿಗಳು ಶಿಸ್ತಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಮಾರ್ಗದರ್ಶನ ನೀಡಿದ್ದರು, ಜನ ಬೆಳೆ ಹಾಕಿ ಕೈ ಸುಟ್ಟು ಕೊಂಡಿದ್ದಾರೆ‌. ರೈತನಿಗೆ ಎಲ್ಲೋ ಬೆಳೆ ಬರಬಹುದು ಎನ್ನುವ ಭರವಸೆ ಇರುತ್ತದೆ‌. ಇದರಲ್ಲಿ ಅವರ ನಡೆ ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದರು.

ಕಂದಾಯ, ಸಮಾಜ ಕಲ್ಯಾಣ, ಪಿಡಿಓ ಸೇರಿದಂತೆ ಜನರ ನಡುವೆ ಕೆಲಸ ಮಾಡುವ ಅಧಿಕಾರಿಗಳು ಜಿಲ್ಲೆಯಲ್ಲಿ ಎಲ್ಲಿರುತ್ತಾರೆ. ಪ್ರವಾಸ ಕಾರ್ಯಕ್ರಮ, ದೂರವಾಣಿ ಸಂಖ್ಯೆ ಹಾಗೂ ‌ಎಲ್ಲದರ ಅಪ್‌ಡೇಟ್ ನಿಖರವಾಗಿ ಇರಬೇಕು. ಡ್ಯಾಶ್ ಬೋರ್ಡ್ ಮುಖಾಂತರ ಬರದ ಮಾಹಿತಿ ಸೇರಿದಂತೆ ಜನರಿಗೆ, ರೈತರಿಗೆ ಅನುಕೂಲವಾಗುವಂತಹ ಮಾಹಿತಿಗಳನ್ನು ನೀಡಬೇಕು. ಭಾರತ್ ಜೋಡೋ ಸಂಘಗಳ ರಚನೆ ಪಕ್ಷಾತೀತವಾಗಿ ನಡೆಯಬೇಕು. ಯುವಕರು ನಮ್ಮ ಕಲೆ‌, ಕ್ರೀಡೆಗಳ ಬಗ್ಗೆ ಆಸಕ್ತಿ ತಳೆಯಬೇಕು. ಇದರ ರಚನೆಗೆ ಹೆಚ್ಚು ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.

ಜಮೀನುಗಳನ್ನು ಗುರುತಿಸಿ ಪ್ರತಿ ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು. ಈಗಾಗಲೇ ಡಿಸಿಎಂ ಸೂಚನೆ ನೀಡಿದ್ದಾರೆ. ಪ್ರತಿ ತಾಲೂಕಿನಲ್ಲಿ 50 ಸಾವಿರ ನಿವೇಶನಗಳನ್ನು ಹಂಚುವ ಗುರಿ ಸರ್ಕಾರದ್ದು. ಖಾಸಗಿ ಬಡಾವಣೆಗಳಲ್ಲಿನ ರಸ್ತೆಗಳನ್ನು ಸರ್ಕಾರಿ ರಸ್ತೆ ಎಂದು ಘೋಷಣೆ ಮಾಡಲಾಗಿದೆ ಎಂದರು.

ಸಿಎಂ ನಿಮ್ಮ ನೋವು ಕೇಳಲು ಅವಕಾಶ ನೀಡಿದ್ದರೂ ಅಧಿಕಾರಿಗಳು ಬಾಯಿಯೇ ಬಿಡುತ್ತಿಲ್ಲವಲ್ಲ. ಮತ್ತೇಕೆ ನೀವು ಅಧಿಕಾರಿಗಳಾಗಿದ್ದೀರಿ ಎಂದ ಮುಖ್ಯಮಂತ್ರಿಯವರು ಪ್ರತಿ  ಅಧಿಕಾರಿಗಳನ್ನು ಕೇಳುತ್ತಾ ಹೋದರು. ಅಧಿಕಾರಿಗಳ ಪ್ರತಿಕ್ರಿಯೆ ಬರದಿದ್ದಕ್ಕೆ “ಮತ್ತೊಮ್ಮೆ ನಿಮಗೆ ಈ ಅವಕಾಶ ಸಿಗಲಿದೆಯೇ?” ಎಂದು ಮರು ಪ್ರಶ್ನಿಸಿದರು. ವ್ಯವಸ್ಥೆಯನ್ನು ಒಂದೇ ಸಲ ರಿಪೇರಿ ಮಾಡಲು ಆಗುವುದಿಲ್ಲ ಎಂದು ನನಗೂ ತಿಳಿದಿದೆ. ನಾನು ಎರಡು ಮೂರು ತಿಂಗಳು ಸುಮ್ಮನೆ ಇದ್ದೇನೆ. ನಂತರ ನನ್ನ ಕಾರ್ಯ ವೈಖರಿಯನ್ನು ನಿಮಗೆ ಅರ್ಥ ಮಾಡಿಸಲಿದ್ದೇನೆ ಎಂದು ಎಚ್ಚರಿಕೆ ನೀಡಿದರು.

ನಮಗೆ ಐದು ವರ್ಷ ಅಧಿಕಾರ. ನೀವು ನಿವೃತ್ತಿ ಆಗುವ ತನಕ ಜನ ಸೇವೆ ಮಾಡಬಹುದು. ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ನಿಮ್ಮ ಕೆಲಸದ ಬಗ್ಗೆ ನಿಮಗೆ ಸ್ವಯಂ ತೃಪ್ತಿ ಆಗಬೇಕು ಎಂದರು.

ಜಿಲ್ಲೆಯಲ್ಲಿ 16,391 ಮತಗಳ ಮ್ಯಾಪಿಂಗ್ ಆಗಿಲ್ಲ. 12,364 ಜನರಿಗೆ ನೋಟಿಸ್ ಜಾರಿ ಆಗಿದೆ, 35,061 ನೋಟಿಸ್ ಜಾರಿಗೆ ಬಾಕಿ ಇದೆ. 31039 anomalies ಆಗಿದೆ. ಯಾರ ಮತವೂ ತಪ್ಪಿ ಹೋಗಬಾರದು. ಸ್ಥಳಾಂತರ ಆದವರು ಅವರ ಇಚ್ಚೆಗೆ ಅನುಗುಣವಾಗಿ ಮಾಡಿಕೊಂಡಿರುತ್ತಾರೆ. ಮತ ತಪ್ಪಿ ಹೋದರೆ ಜನರಿಗೆ ನೀಡುತ್ತಿರುವ ಜನಕಲ್ಯಾಣ ಯೋಜನೆಗಳನ್ನು ನಿಲ್ಲಿಸಬೇಕಾಗಬಹುದು. ಕರ್ನಾಟಕದ ಮತದಾರ ತನ್ನದೇ ರಾಜ್ಯದ ಯೋಜನೆಗಳಿಂದ ವಂಚಿತರಾಗಬಾರದು. ಬಿಎಲ್ ಎ 2 ಗಳು ಕೆಲವೊಂದು ಕಡೆ ಸರಿಯಾಗಿ ಕೆಲಸ ಮಾಡಿಲ್ಲ. ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Related Posts

Leave a Reply

Your email address will not be published. Required fields are marked *