Tuesday, September 01, 2026
Menu

ಬಿಜೆಪಿ ಹೋರಾಟ ನಿಲ್ಲುವುದಿಲ್ಲ, ಇನ್ನಷ್ಟು ಸಚಿವರು ರಾಜೀನಾಮೆ: ಆರ್‌ ಅಶೋಕ

ಬಿ.ನಾಗೇಂದ್ರ ರಾಜೀನಾಮೆ ನೀಡಿದ ಕೂಡಲೇ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ. ಬರಗಾಲ, ಕೆಪಿಎಸ್‌ಸಿ ಹಗರಣ, ಬಿಡದಿ ಟೌನ್‌ಶಿಪ್‌ ಮೊದಲಾದ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟದಿಂದಾಗಿ ಇನ್ನಷ್ಟು ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದರು.

ಬಿಜೆಪಿ ಹಮ್ಮಿಕೊಂಡ ಬಳ್ಳಾರಿ ಚಲೋ ಪಾದಯಾತ್ರೆ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸಿದ್ದರಾಮಯ್ಯನವರ ಸರ್ಕಾರದಲ್ಲಿ ದರೋಡೆ ಮಾಡುತ್ತಿದ್ದರೆ, ಡಿಕೆಶಿ ಸರ್ಕಾರ ಪಿಕ್‌ ಪಾಕೆಟ್‌ ಮಾಡುತ್ತಿದೆ. ಹಾಲು, ಆಲ್ಕೋಹಾಲ್‌, ಯೂರಿಯಾ ಮೊದಲಾದವುಗಳ ಮೇಲೆ ತೆರುಗೆ ಹಾಕಿ ಪಿಕ್‌ ಪಾಕೆಟ್‌ ಮಾಡಲಾಗುತ್ತಿದೆ. 175 ತಾಲೂಕುಗಳಲ್ಲಿ ಬರಗಾಲವಿದ್ದರೂ ಹಣವಿಲ್ಲದೆ 74 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿಲ್ಲ. ಒಂದೋ ಘೋಷಣೆ ಮಾಡಬೇಕು, ಇಲ್ಲವಾದರೆ ಪಾಪರ್‌ ಆಗಿದ್ದೇವೆಂದು ಒಪ್ಪಿಕೊಳ್ಳಬೇಕು. ಸೂರ್ಯಕಾಂತಿ, ಜೋಳ, ತೊಗರಿ ಮೊದಲಾದ ಬೆಳೆಗಳು ಅರ್ಧ ಮಾತ್ರ ಬೆಳೆದು ಫಲಸು ನೀಡದೆ ಹಾಳಾಗಿವೆ. ಮಾನ ಮರ್ಯಾದೆ ಇದ್ದಿದ್ದರೆ ಈಗಾಗಲೇ ರೈತರಿಗೆ ಪರಿಹಾರ ನೀಡಬೇಕಿತ್ತು ಎಂದರು.

ಕಾಂಗ್ರೆಸ್‌ ಸರ್ಕಾರ ಈವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಗ್ರಾಮಗಳಲ್ಲಿ ಜನರು ಇನ್ನೂ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಇದರ ನಡುವೆ ಸಿಎಂ ಅಧ್ಯಯನ ಮಾಡಲು ಪ್ರವಾಸ ಮಾಡುತ್ತಿದ್ದಾರೆ. ಅಧಿಕಾರ ಕೈಯಲ್ಲಿ ಇರುವಾಗ ಅಧ್ಯಯನ ಏಕೆ ಮಾಡಬೇಕು,  ಹೊಸ ಮುಖ್ಯಮಂತ್ರಿ ಮೂರು ತಿಂಗಳಾದರೂ ಒಂದೇ ಒಂದು ಉತ್ತಮ ಕೆಲಸ ಮಾಡಿಲ್ಲ. ನಮ್ಮ ಹೋರಾಟದಿಂದಾಗಿ ಬಿ.ನಾಗೇಂದ್ರ ಅವರಿಗೆ ಗೇಟ್‌ ಪಾಸ್‌ ನೀಡಲಾಗಿದೆ.  ಇಲ್ಲಿ ನಾಗೇಂದ್ರ ಬಲಿಪಶು. ವಾಲ್ಮೀಕಿ ನಿಗಮದ 187 ಕೋಟಿ ರೂ. ಕಾಂಗ್ರೆಸ್‌ ಹೈಕಮಾಂಡ್‌ಗೆ ತಲುಪಿದೆ. ತೆಲಂಗಾಣ ಚುನಾವಣೆ, ಬಳ್ಳಾರಿ ಚುನಾವಣೆಗೆ ಈ ಹಣ ಬಳಕೆಯಾಗಿದೆ. ನಾಗೇಂದ್ರ ಕದ್ದಿದ್ದು ಮಾತ್ರ, ಅದನ್ನು ಬಳಸಿದ್ದು  ಕಾಂಗ್ರೆಸ್‌ ಪಕ್ಷ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಒಂದು ವಿಕೆಟ್‌ ಬಿದ್ದಿದೆ. ಈಗ ಮರಿ ಖರ್ಗೆ ಎಂದು ಹೆಸರಾದ ಪ್ರಿಯಾಂಕ್‌ ಖರ್ಗೆ ಅವರ ವಿಕೆಟ್‌ ಬೀಳಬೇಕಿದೆ. ಪ್ರತಿ ದಿನ ಆರ್‌ಎಸ್‌ಎಸ್‌ ನೋಂದಣಿ ಬಗ್ಗೆ ಅವರು ಪ್ರಶ್ನೆ ಮಾಡುತ್ತಾರೆ. ಕೆಪಿಎಸ್‌ಸಿ ಹಗರಣದಲ್ಲಿ ಹುದ್ದೆಗಳು ಒಂದೆರಡು ಕೋಟಿ ರೂ. ಗೆ ಮಾರಾಟವಾಗಿದೆ. ವೈದ್ಯಾಧಿಕಾರಿ, ಶಿಕ್ಷಕ, ಜಿಲ್ಲಾಧಿಕಾರಿ ಹೀಗೆ ಎಲ್ಲಕ್ಕೂ ದರ ನಿಗದಿಯಾಗಿದೆ. ಈ ಮೂರು ವರ್ಷದಲ್ಲಿ ಎರಡೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೇ ಜನವರ್ಗಕ್ಕೂ ಇವರಿಂದ ನೆರವಾಗಿಲ್ಲ. ಎಲ್ಲರಿಗೂ ಉಚಿತ ಎಂದು ಹೇಳಿ, ಈಗ ಪಿಂಚಣಿ ಕೂಡ ಕೈಗೆ ಸಿಗುತ್ತಿಲ್ಲ. ಗೃಹಲಕ್ಷ್ಮಿಯ 5,000 ಕೋಟಿ ರೂ. ಇನ್ನೂ ಕೊಟ್ಟಿಲ್ಲ ಎಂದರು.

ಸಿಎಂ ಡಿಕೆಶಿವಕುಮಾರ್‌ಗೆ ಬಡವರ, ಮಹಿಳೆಯರ ಕಷ್ಟ ಗೊತ್ತಿಲ್ಲ. ಅವರಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾತ್ರ ಗೊತ್ತಿದೆ. ರಾಜ್ಯಕ್ಕೆ ಅವರಿಂದ ಎಂದಿಗೂ ಒಳ್ಳೆಯದಾಗುವುದಿಲ್ಲ. ಡಿ.ಕೆ.ಶಿ ದೇವಾಲಯಗಳಿಗೆ ಹೋಗಿ ನಾಮ ಎಳೆದುಕೊಳ್ಳುತ್ತಾರೆ. ಆದರೆ ಅವರದ್ದೇ ಸಚಿವರಾದ ಬಸವರಜ ರಾಯರೆಡ್ಡಿ ಇಸ್ಲಾಂ ಧರ್ಮ ಅತ್ಯುತ್ತಮ ಎನ್ನುತ್ತಾರೆ. ಹಿಂದೂ ಧರ್ಮದಲ್ಲಿ ಹುಟ್ಟಿ, ಲಿಂಗಾಯತರಿಂದ ಮತ ಪಡೆದು ಇಸ್ಲಾಂ ಧರ್ಮವೇ ಉತ್ತಮ ಎನ್ನುತ್ತಾರೆ. ಸಿಎಂ ಡಿ.ಕೆ.ಶಿವಕುಮಾರ್‌ ನಿಜವಾದ ಹಿಂದೂ ಆಗಿದ್ದರೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಹಿಂದೂಗಳನ್ನು ಅವಹೇಳನ ಮಾಡಿದರೆ ಮಾತ್ರ ಮತ ಸಿಗುವುದು ಎಂದುಕೊಂಡಿದ್ದಾರೆ. ಇದು ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ಇವರ ಠೇವಣಿ ಕೂಡ ಉಳಿಯುವುದಿಲ್ಲ ಎಂದು ಹೇಳಿದರು.

ಬಿ.ನಾಗೇಂದ್ರ ಅವರ ರಾಜೀನಾಮೆ ಆದ ಕೂಡಲೇ ನಮ್ಮ ಹೋರಾಟ ನಿಲ್ಲುವುದಿಲ್ಲ. ಬರಗಾಲ ಪರಿಹಾರ, ಕೆಪಿಎಸ್‌ಸಿ ಹಗರಣ, ಪಿಂಚಣಿ ಬಾಕಿ, ರೇಷನ್‌ ಕಾರ್ಡ್‌ ರದ್ದು, ಕಸದ ಟೆಂಡರ್‌ ಹಗರಣ, ಸುರಂಗ ರಸ್ತೆ, ಬಿಡದಿ ಟೌನ್‌ಶಿಪ್‌ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ. ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಪರೀಕ್ಷಾ ಅಕ್ರಮದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು

ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದ ಜೆನ್‌ ಜೀ ಹೋರಾಟಕ್ಕೆ  ಸಂಪೂರ್ಣ ಬೆಂಬಲ ನೀಡುತ್ತೇನೆ ಹಾಗೂ ನಾನು ಕೂಡ ಅದರಲ್ಲಿ ಭಾಗವಹಿಸುತ್ತೇನೆ. ಈ ಹಿಂದೆಯೂ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಹೋರಾಟ ನಡೆದಾಗ ಅಲ್ಲಿಗೂ ಹೋಗಿ ಭಾಗವಹಿಸಿದ್ದೆ. ಕೆಪಿಎಸ್‌ಸಿಯಲ್ಲಿ ಅಕ್ರಮ ನಡೆಸಿದ ಎಲ್ಲರನ್ನೂ ಬಂಧಿಸಿ ಶಿಕ್ಷೆ ನೀಡಬೇಕು. ಈ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಇಡೀ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ ಎಂದು ಆಗ್ರಹಿಸಿದರು.

ಪರೀಕ್ಷಾ ಅಕ್ರಮದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ  ಹೆಸರು ಕೇಳಿಬಂದಿದೆ. ಈಗಾಗಲೇ ನಮ್ಮ ಹೋರಾಟದಿಂದಾಗಿ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಇನ್ನೂ ಒಬ್ಬ ಸಚಿವರ ರಾಜೀನಾಮೆಯಾಗಲಿದೆ. ಬಿ.ನಾಗೇಂದ್ರ ಹಗರಣ ಮಾಡಿದ್ದರಿಂದಲೇ ಸಿದ್ದರಾಮಯ್ಯನವರ ಅವಧಿಯಲ್ಲಿ ರಾಜೀನಾಮೆ ನೀಡಿದ್ದರು. ದಲಿತರಿಗೆ ಸೇರಿದ 187 ಕೋಟಿ ರೂ. ಅಕ್ರಮ ಮಾಡಿದ್ದು, ಅದನ್ನು ಕೋರ್ಟ್‌ ತೀರ್ಮಾನಿಸಲಿದೆ. ಈ ಹಣ ಆಂಧ್ರಕ್ಕೂ ಹೋಗಿತ್ತು ಹಾಗೂ ಅವರ ವೈಯಕ್ತಿಕ ಖಾತೆಗೂ ಹೋಗಿತ್ತು. ಇದು ಸಾಬೀತಾಗಿದ್ದರಿಂದಲೇ  ರಾಜೀನಾಮೆ ನೀಡಿದ್ದಾರೆ ಎಂದರು.

175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ ಎಂದು ನಾನು ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಪ್ರತಿ ರೈತರಿಗೆ ಎಕರೆಗೆ 50,000 ರೂ. ಪರಿಹಾರ ನೀಡಬೇಕು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದೇನೆ. ಆದರೆ ಸರ್ಕಾರದಲ್ಲಿ ಹಣವಿಲ್ಲದೆ ನಾಟಕ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿಗೆ ಹೋಲಿಸಿದರೆ ದುಪ್ಪಟ್ಟು ಪರಿಹಾರವನ್ನು ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಕೂಡ ಇದೇ ರೀತಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಹಿಂದೂ ಧರ್ಮ ತಾಯಿ ಇದ್ದಂತೆ. ಅಂತಹ ತಾಯಿಗೆ ದ್ರೋಹ ಬಗೆದು ಇಸ್ಲಾಂ ಶ್ರೇಷ್ಠ ಎಂದಿದ್ದಾರೆ. ಚುನಾವಣೆಯಲ್ಲಿ ಲಿಂಗಾಯತ ಎಂದು ಹೇಳಿಕೊಂಡು ನಂತರ ಇಸ್ಲಾಂ ಧರ್ಮವನ್ನು ಹೊಗಳುತ್ತಿದ್ದಾರೆ. ಮಠಗಳಿಗೆ ಹೋಗಲ್ಲ ಎಂದು ಧರ್ಮಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷ ಅವರ ವಿರುದ್ಧ ಕ್ರಮ ಕೈಗೊಂಡು ಸಚಿವ ಸ್ಥಾನದಿಂದ ವಜಾ ಮಾಡಬೇಕು ಅಥವಾ ಹಿಂದೂ ವಿರೋಧಿ ಎಂದು ಒಪ್ಪಿಕೊಳ್ಳಬೇಕು. ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದರು.

Related Posts

Leave a Reply

Your email address will not be published. Required fields are marked *