Menu

ರಾಜ್ಯದಲ್ಲಿ H1N1: 4,130ಕ್ಕೂ ಹೆಚ್ಚು ಪ್ರಕರಣ ಪತ್ತೆ

ರಾಜ್ಯದಲ್ಲಿ H1N1 ಸೋಂಕು ಆತಂಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, 4,130ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿದ್ದು ಆರೋಗ್ಯ ಇಲಾಖೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಬೆಂಗಳೂರಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ರಾಜ್ಯದಲ್ಲಿ 4,583 ಪ್ರಕರಣ ದಾಖಲಾಗಿದ್ದವು. 2026ರಲ್ಲಿ ಈಗಾಗಲೇ 4,130ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಸೋಂಕು ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.

ಜಿಲ್ಲಾವಾರು ಮಾಹಿತಿಯ ಪ್ರಕಾರ ಬೆಂಗಳೂರು ಜಿಬಿಎ ವ್ಯಾಪ್ತಿಯಲ್ಲಿ 2,033 ಪ್ರಕರಣಗಳು, ಬೆಂಗಳೂರು ನಗರದಲ್ಲಿ 982 ಪ್ರಕರಣಗಳು ವರದಿಯಾಗಿವೆ. ಇನ್ನು ಉಡುಪಿಯಲ್ಲಿ 293, ಮೈಸೂರಿನಲ್ಲಿ 184, ಶಿವಮೊಗ್ಗದಲ್ಲಿ 91, ದಕ್ಷಿಣ ಕನ್ನಡದಲ್ಲಿ 87, ಬಳ್ಳಾರಿಯಲ್ಲಿ 51, ಬೆಳಗಾವಿಯಲ್ಲಿ 45 ಹಾಗೂ ಉತ್ತರ ಕನ್ನಡದಲ್ಲಿ 41 ಪ್ರಕರಣಗಳು ದಾಖಲಾಗಿವೆ.

ಮಂಡ್ಯದಲ್ಲಿ 31, ಹಾವೇರಿಯಲ್ಲಿ 26, ಬೆಂಗಳೂರು ಗ್ರಾಮಾಂತರದಲ್ಲಿ 26, ಬೆಂಗಳೂರು ದಕ್ಷಿಣದಲ್ಲಿ 26, ಚಾಮರಾಜನಗರದಲ್ಲಿ 20 ಹಾಗೂ ದಾವಣಗೆರೆಯಲ್ಲಿ 23 ಪ್ರಕರಣಗಳು ದೃಢಪಟ್ಟಿವೆ, ಆರೋಗ್ಯ ಇಲಾಖೆ ಜಿಲ್ಲಾವಾರು ನಿಗಾ ಮುಂದುವರಿಸಿದೆ.

H1N1 ಇನ್‌ಫ್ಲುಯೆಂಜಾ ವೈರಸ್‌ನ ಒಂದು ರೂಪವಾಗಿದ್ದು, ಸಾಮಾನ್ಯವಾಗಿ ಉಸಿರಾಟದ ಸೋಂಕಿಗೆ ಕಾರಣವಾಗುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಹೊರಬರುವ ಉಸಿರಾಟದ ಹನಿಗಳ ಮೂಲಕ ವೈರಸ್ ಹರಡಬಹುದು. ಜ್ವರ, ಕೆಮ್ಮು, ಗಂಟಲು ನೋವು, ಮೂಗು ಸೋರುವುದು ಅಥವಾ ಮೂಗು ಕಟ್ಟುವುದು, ತಲೆನೋವು, ಮೈಕೈ ನೋವು ಹಾಗೂ ತೀವ್ರ ಸುಸ್ತು ಪ್ರಮುಖ ಲಕ್ಷಣಗಳಾಗಿವೆ. ಕೆಲವು ಸಂದರ್ಭಗಳಲ್ಲಿ ವಾಂತಿ ಅಥವಾ ಬೇಧಿ ಬಾಧಿಸಬಹುದು.

ಸೋಂಕು ದೃಢಪಟ್ಟವರು ಮನೆಯಲ್ಲೇ ಪ್ರತ್ಯೇಕವಾಗಿರುವುದು ಹಾಗೂ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಬಳಸಿ ಬಾಯಿ-ಮೂಗನ್ನು ಮುಚ್ಚಿಕೊಳ್ಳಬೇಕು. ಮಾಸ್ಕ್ ಬಳಸುವುದರಿಂದಲೂ ಸೋಂಕು ಹರಡುವ ಅಪಾಯ ಕಡಿಮೆ ಮಾಡಬಹುದು.

ಸೋಪ್ ಮತ್ತು ನೀರಿನಿಂದ ಆಗಾಗ ಕೈಗಳನ್ನು ತೊಳೆಯಬೇಕು, ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು. ಕಣ್ಣು, ಮೂಗು ಮತ್ತು ಬಾಯಿಯನ್ನು ಕೈಗಳಿಂದ ಮುಟ್ಟುವುದನ್ನು ತಪ್ಪಿಸಬೇಕು. ಜ್ವರ ಅಥವಾ ಕೆಮ್ಮಿನಂತಹ ಲಕ್ಷಣಗಳಿದ್ದರೆ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದು ಒಳ್ಳೆಯದು.

ಆರೋಗ್ಯ ಸಚಿವ ಯುಟಿ ಖಾದರ್‌ ಅಧ್ಯಕ್ಷತೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆದಿದೆ. ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯದ ಆರೋಗ್ಯ ವ್ಯವಸ್ಥೆಯು ಅಗತ್ಯ ಮೂಲಸೌಕರ್ಯ, ಬೆಡ್‌ಗಳು ಹಾಗೂ ಔಷಧಿಗಳ ಸಂಗ್ರಹದೊಂದಿಗೆ ಸನ್ನದ್ಧವಾಗಿದೆ.

ಇನ್‌ಫ್ಲುಯೆಂಜಾ ಲಕ್ಷಣಗಳುಳ್ಳ ಜ್ವರ ಮತ್ತು ತೀವ್ರ ಉಸಿರಾಟದ ಸೋಂಕು ಪ್ರಕರಣಗಳನ್ನು ಪತ್ತೆಹಚ್ಚಲು ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳನ್ನಾಗಿ ಮಾಡಲಾಗಿದೆ.

ರಾಜ್ಯದ ರೋಗನಿರ್ಣಯ ಪ್ರಯೋಗಾಲಯಗಳು ಹಾಗೂ ನಿಮ್ಹಾನ್ಸ್ ಮೂಲಕ ಮಾದರಿಗಳ ಕ್ಷಿಪ್ರ ಪರೀಕ್ಷೆಗೆ ಅಗತ್ಯ ಕಿಟ್‌ಗಳು ಮತ್ತು ಉಪಕರಣಗಳನ್ನು ಒದಗಿಸಲಾಗಿದೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳವರೆಗೆ ಅಗತ್ಯವಿರುವಷ್ಟು ಒಸೆಲ್ಟಾಮಿವಿರ್ ಮಾತ್ರೆಗಳು/ಔಷಧಿಗಳು, ಮಾಸ್ಕ್‌ಗಳು ಹಾಗೂ ಪಿಪಿಇ ಕಿಟ್‌ ದಾಸ್ತಾನು ಇರಿಸಲಾಗಿದೆ. ರೋಗಿಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.

 

Related Posts

Leave a Reply

Your email address will not be published. Required fields are marked *