Menu

ಯಶ್ ಪಾಲ ಸುವರ್ಣ ಡಿಎಎನ್‌ಎ ತಾಲಿಬಾನ್‌ನದು ಆಗಿರಬೇಕು: ಸಚಿವ ಖಾದರ್

ಧ್ವಂಸ ಎನ್ನುವ ಮಾತು ತಾಲಿಬಾನ್ ನಿಂದ ಬರುವುದು. ಶಾಸಕ ಯಶ್ ಪಾಲ್ ಸುವರ್ಣ ಡಿಎನ್ಎ ಅಲ್ಲಿಯದ್ದೇ ಇರಬೇಕು, ಈ ಹಿನ್ನೆಲೆಯಲ್ಲಿ‌ ಅವರ ಡಿಎನ್ ಎ ಪರೀಕ್ಷಿಸಬೇಕು .  ಯಶ್ ಪಾಲ್ ಸುವರ್ಣರದ್ದು ನಾಲಾಯಕ್ ಹೇಳಿಕೆ. ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿಲ್ಲ, ಯಾಕೆಂದರೆ ಅವರು ರಾಹುಲ್ ಗಾಂಧಿ ಕಾಲಿನ ಕಿರು ಬೆರಳಿಗೂ ಸಮವಲ್ಲ. ಅವರೆಲ್ಲಿ, ಇವರೆಲ್ಲಿ? ಇಂತಹ ಹೇಳಿಕೆಯಿಂದ ಏನು ಪ್ರಯೋಜನ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಕಿಡಿಕಾರಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಕರಾವಳಿಗೆ ಎಲ್ಲ ವಿಚಾರದಲ್ಲೂ ಘನತೆ, ಗೌರವ ಇದೆ. ಎಲ್ಲ ಪಕ್ಷದ ಶಾಸಕರು ಕರಾವಳಿ ಗೌರವವನ್ನು ಉಳಿಸಿಕೊಂಡು ಬಂದಿದ್ದಾರೆ. ಯಶ್ ಪಾಲ್ ಅವರ ಹೇಳಿಕೆ ಕಪ್ಪು ಚುಕ್ಕೆ ಆಗಿದ್ದು ಅವರದ್ದೇ ಮನೆಯವರಾಗಲೀ, ಮಕ್ಕಳ ಸಹಿತ ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಧ್ವಂಸ ಎನ್ನುವ ಮಾತು ತಾಲಿಬಾನ್ ನಿಂದ ಬರುವುದು. ಇವರ ಡಿಎನ್ ಎ ಅಲ್ಲಿಯದ್ದೇ ಇರಬೇಕು, ಈ ಹಿನ್ನೆಲೆಯಲ್ಲಿ ಡಿಎನ್ ಎ ಪರೀಕ್ಷಿಸಬೇಕು ಎಂದು ಖಾದರ್ ಟೀಕಿಸಿದರು.

ಈ ದೇಶದಲ್ಲಿ ಗಾಂಧಿ ಕುಟುಂಬವನ್ನು ನಾಶ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ರಕ್ತ ಬಿದ್ದಿದ್ದರಿಂದ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಶಾಂತಿ ನೆಲೆಸಿದೆ. ಅವರ ತ್ಯಾಗವನ್ನು ಯಾರೂ ಮರೆಯಲಾಗದು. ಹೀಗಿರುವಾಗ  ಯಶ್‌ ಪಾಲ್‌ ಅವರ  ಹೇಳಿಕೆಯಿಂದ ಏನು ಪ್ರಯೋಜನ. ಅವರು ತಮ್ಮ ಅಸ್ತಿತ್ವ ಉಳಿಸಲು ಏನೇನೋ ಮಾತಾಡ್ತಾರೆ‌ ಎಂದರು.

ಆಸ್ಪತ್ರೆಗಳಲ್ಲಿ ಡಿಜಿಟಲ್ ಸ್ಪರ್ಶ, ಟೆಲಿ-ಐಸಿಯು, ಮಕ್ಕಳ ತುರ್ತು ಚಿಕಿತ್ಸಾ ವಿಭಾಗ

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 183 ಸರಕಾರಿ ಆಸ್ಪತ್ರೆಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಸಂಪೂರ್ಣ ಡಿಜಿಟಲ್ ಸ್ಪರ್ಶ ನೀಡಲಾಗುತ್ತದೆ. ಈಗಾಗಲೇ ನಾಲ್ಕು ಜಿಲ್ಲೆಯ 40 ಆಸ್ಪತ್ರೆಗಳಲ್ಲಿ ಪೈಲೆಟ್ ಯೋಜನೆ ಅಡಿಯಲ್ಲಿ ಇ ಹೆಲ್ತ್ ಸಾಫ್ಟವೇರ್ ಜೋಡಿಸುವ ಕೆಲಸ ನಡೆಯುತ್ತಿದೆ ಎಂದು  ತಿಳಿಸಿದರು.

ಸರ್ಕಾರಿ ಆರೋಗ್ಯ ಸೇವೆ ಹೆಚ್ಚು ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಜನಸ್ನೇಹಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಲಾಗುತ್ತಿದೆ. ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಟೆಲಿ-ಐಸಿಯು, ಮಕ್ಕಳ ತುರ್ತು ಚಿಕಿತ್ಸಾ ವಿಭಾಗ ಮತ್ತು ಶಿಶು ಆರೋಗ್ಯ ಕೇಂದ್ರಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಜತೆಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿ ಬಿಡುಗಡೆಯಾಗುವ ವೇಳೆ ಸರ್ಕಾರ ಅವರ ಚಿಕಿತ್ಸೆಗೆ ಎಷ್ಟು ವೆಚ್ಚ ಮಾಡಿದೆ ಎಂಬುದನ್ನು ವಿವರಿಸುವ ಬಿಲ್ ಶುಲ್ಕ ನೀಡುವ ವ್ಯವಸ್ಥೆ ಕೂಡ ಜಾರಿಗೆ ತರಲಾಗುವುದು. ಇದರಿಂದ ಸಾರ್ವಜನಿಕರಲ್ಲಿ ಸರ್ಕಾರದ ಆರೋಗ್ಯ ವೆಚ್ಚದ ಬಗ್ಗೆ ಅರಿವು ಮೂಡಲಿದೆ ಎಂದರು.

ಆರೋಗ್ಯ ಇಲಾಖೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ ಪರಿವರ್ತಿಸುವ ಯೋಜನೆ ರೂಪಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಪ್ರತಿಯೊಬ್ಬ ರೋಗಿಯ ಆರೋಗ್ಯ ಹಾಗೂ ಚಿಕಿತ್ಸೆಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಪರಿಣಾಮ ರೋಗಿಯ ಚಿಕಿತ್ಸೆಯ ನಿರಂತರತೆ ಕಾಪಾಡಲು ಮತ್ತು ಸಕಾಲದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಅನುಕೂಲ ಆಗಲಿದೆ ಎಂದು ಹೇಳಿದರು.

ನಮಗೆ ಆಸ್ಪತ್ರೆಗಳಲ್ಲಿ ವೈದ್ಯರ ಸಂಖ್ಯೆಯಷ್ಟೇ ಮುಖ್ಯವಲ್ಲ, ರೋಗಿಗೆ ಅಗತ್ಯ ಮತ್ತು ಆಯ್ಕೆಯ ಚಿಕಿತ್ಸೆ ಸಿಗುವುದು ಮುಖ್ಯ. ಈ ದೃಷ್ಟಿಯಿಂದ ಅಲೋಪತಿ ಆಸ್ಪತ್ರೆಗಳ ಪಕ್ಕದಲ್ಲೇ ‘ಆಯುಷ್ ಮಂದಿರ’ಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ. ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಅಜಿನಮೊಟೊ, ಕೃತಕ ಬಣ್ಣ ಬಳಕೆ ಹಾಗೂ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ಒದಗಿಸುವಂತೆ ಸೂಚನೆ ನೀಡಲಾಗುವುದು. ಆಹಾರದಲ್ಲಿ ಅಜಿನಮೊಟೊ ಹಾಗೂ ಕೃತಕ ಬಣ್ಣಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ವಿಶ್ವಕ್ಕೆ ಮಾದರಿ ಆಗಿದ್ದು, ಆಹಾರ ಸುರಕ್ಷತೆಯ ವಿಚಾರದಲ್ಲಿ ಅಮೆರಿಕ ಕಠಿಣ ಮಾನದಂಡ ಅನುಸರಿಸುತ್ತಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಸಿರಿಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಿದರೆ ರೈತರಿಗೆ ಉತ್ತಮ ಆರ್ಥಿಕ ಲಾಭ ದೊರೆಯಲಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *