Menu

ಅಕ್ರಮ ಮರಳು ಗಣಿಗಾರಿಕೆ: ತನಿಖಾ ವರದಿ ಸಲ್ಲಿಸಿದ ಲೋಕಾಯುಕ್ತ ಪೊಲೀಸರು

ಬಾಗಲಕೋಟೆಯಲ್ಲಿ  ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ತನಿಖೆ ನಡೆಸಿ ರಾಜ್ಯ ಲೋಕಾಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು, ಬಾಗಲಕೋಟೆ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಬದಾಮಿ, ಮುಧೋಳ, ಜಮಖಂಡಿ, ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳ ತಹಶೀಲ್ದಾರ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ, ಇಳಕಲ್, ಬಾದಾಮಿ ಹಾಗೂ ಮುಧೋಳ ತಾಲ್ಲೂಕಿನಲ್ಲಿ ಒಟ್ಟು 41 ಮರಳು ಗಣಿಗಾರಿಕೆ ಸ್ಥಳಗಳಿಗೆ ಲೋಕಾಯುಕ್ತ ಸಂಸ್ಥೆಯ ವಿವಿಧ ತಂಡಗಳು ಸ್ಥಳ ತನಿಖೆ ಕೈಗೊಂಡಿದ್ದರು. ಅವುಗಳಲ್ಲಿ  9 ಗಣಿಗಾರಿಕೆ ಸ್ಥಳಗಳು ಅಧಿಕೃತವಾಗಿದ್ದು, ಉಳಿದ ಮರಳು ಗಣಿಗಾರಿಕೆ ಸ್ಥಳಗಳು ಅನಧಿಕೃತ ಸ್ಥಳಗಳಾಗಿದ್ದು, ಸ್ಥಳಗಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಗಣಿಗಾರಿಕೆ ಚಟುವಟಿಕೆಯಲ್ಲಿ ತೊಡಗಿದ 62 – ಟಿಪ್ಪರ್‌ಗಳು, 24-ಹಿಟ್ಯಾಚಿ/ಜೆ.ಸಿ.ಬಿಗಳು, 15-ಬೋಟ್‌ಗಳು/ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ 25 ಪ್ರಕರಣಗಳು ದಾಖಲಾಗಿವೆ. ಮರಳು ಗಣಿಗಾರಿಕೆ ಸ್ಥಳಗಳ ಪರಿಶೀಲನೆ ಸಂದರ್ಭದಲ್ಲಿ ಕೃಷಿ ಜಮೀನುಗಳ, ನದಿ ದಂಡೆಗಳ ಬಳಿ ಹಾಗೂ ಹಳ್ಳಗಳಲ್ಲಿ ನಿಯಮ ಬಾಹೀರವಾಗಿ ಹಾಗೂ ಅವೈಜ್ಞಾನಿಕವಾಗಿ ಸುಮಾರು 15 ರಿಂದ 20 ಅಡಿಗಳಷ್ಟು ಆಳವಾಗಿ ಯಂತ್ರೋಪಕರಣಗಳನ್ನು ಬಳಸಿ ಮರಳು ತೆಗೆದಿರುವುದು/ತೆಗೆಯುತ್ತಿರುವುದು ದಾಳಿ ಸಂದರ್ಭದಲ್ಲಿ ಕಂಡು ಬಂದಿದೆ. ಇದರಿಂದ, ನದಿಯ ಪಾತ್ರಕ್ಕೆ ಧಕ್ಕೆಪಡಿಸಿ ಹಾನಿ ಮಾಡಲಾಗಿದೆ ಮತ್ತು ಕೃಷಿ ಜಮೀನುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಚಟುವಟಿಕೆ ನಡೆಸಿ, ಅಕ್ಕಪಕ್ಕದ ಜಮೀನುಗಳಲ್ಲಿಯ ಬೆಳೆ ಹಾನಿ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಬಾರಿ ವಾಹನಗಳಲ್ಲಿ ಮರಳು ಸಾಗಾಟ ಮಾಡಿ, ರಸ್ತೆಯ ಡಾಂಬರು ಹಾಗೂ ರಸ್ತೆಯ ಸ್ವರೂಪ ಕಿತ್ತು ಹೋಗಿ ತಗ್ಗು ದಿಣ್ಣೆಗಳಾಗುವಂತೆ ಮಾಡಿ ಸಾರ್ವಜನಿಕ ರಸ್ತೆಗಳನ್ನು ಹಾನಿ ಪಡಿಸಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟು ಮಾಡಲಾಗಿದೆ., ಸದರಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವಲ್ಲಿ ‘ಜಿಲ್ಲಾ ಟಾರ್ಸ್ಪೋರ್ಸ್ ಮತ್ತು ಹುನಗುಂದ, ಇಳಕಲ್, ಬಾದಾಮಿ ಮತ್ತು ಮುಧೋಳ ತಾಲೂಕು ಟಾಸ್ಕ್‌ಪೋರ್ಸ್‌ನವರು       ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಬಾಗಲಕೋಟೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ವರದಿ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *