ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರು ಸರಬರಾಜಿಗೆ ಚಾಲನೆ ಸಿಕ್ಕ ಬಳಿಕ ನಮಗೂ ಕಾವೇರಿ ಕುಡಿಯುವ ನೀರಿನ ಸಂಪರ್ಕ ಮಾಡಿಕೊಡಿ ಎಂದು 58 ಸಾವಿರ ಜನರು ಬೆಂಗಳೂರು ಜಲಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ವರ್ಷ ಬರಗಾಲ ಆವರಿಸಿ ಕೊಳೆವೆ ಬಾವಿಗಳೆಲ್ಲವೂ ಬತ್ತಿ ಹೋಗಿದ್ದವು. ಕುಡಿಯುವ ನೀರು ಸೇರಿದಂತೆ ದಿನಬಳಕೆ ನೀರು ಕೂಡ ಲಭ್ಯವಾಗದೆ ಇಡೀ ಬೆಂಗಳೂರಿನ ಜನತೆ ತತ್ತರಿದ್ದರು. ಬೋರ್‌ವೆಲ್‌ಗಳ ನೀರನ್ನು ನೆಚ್ಚಿಕೊಂಡು ಹೈರಾಣಾಗಿದ್ದರು. ಈ ಹಿನ್ನೆಲೆಯಲ್ಲಿ ಕಾವೇರಿ ನೀರಿಗೆ ಬೇಡಿಕೆಯುಂಟಾಗಿದೆ.
ಕಾವೇರಿ ಕುಡಿಯುವ ಸರಬರಾಜು ಮಾಡುವಂತೆ ಕೋರಿ 2024ರಲ್ಲಿ 58 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.
ಬರಗಾಲದ ನಂತರ ಎಚ್ಚೆತ್ತ ಬೆಂಗಳೂರಿನ ಶೇ.86ರಷ್ಟು ಜನ ಮೇ ತಿಂಗಳ ನಂತರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಳೆದ ವರ್ಷ 38 ಸಾವಿರಕ್ಕೂ ಹೆಚ್ಚು ನೀರಿನ ಸಂಪರ್ಕ ಮಂಜೂರು ಮಾಡಲಾಗಿತ್ತು. 887.82 ಕೋಟಿ ರೂ. ಆದಾಯ ಜಲಮಂಡಳಿಗೆ ಬಂದಿದೆ. ಕಾವೇರಿ 5 ನೇ ಹಂತದ ಯೋಜನೆಯಿಂದ 775 ಎಂಎಲ್ಡಿ ನೀರು ಲಭ್ಯವಿದ್ದು, 2025ರಲ್ಲಿ 1.5 ಲಕ್ಷಕ್ಕೂ ಅಧಿಕ ನೀರಿನ ಸಂಪರ್ಕ ಒದಗಿಸುವ ಗುರಿ ಇದೆ.
ಬೆಂಗಳೂರು ಪೂರ್ವದಿಂದ 12,421 ಅರ್ಜಿ ಸಲ್ಲಿಕೆಯಾಗಿದ್ದು, 8,267 ಸಂಪರ್ಕ ಕಲ್ಪಿಸಲಾಗಿದೆ. ಬೆಂಗಳೂರು ಪಶ್ಚಿಮದಿಂದ 18,512 ಅರ್ಜಿ ಸಲ್ಲಿಕೆಯಾಗಿದ್ದು, 12,130 ಸಂಪರ್ಕ ನೀಡಲಾಗಿದೆ. ಬೆಂಗಳೂರು ಉತ್ತರದಿಂದ 8,197 ಅರ್ಜಿ ಸಲ್ಲಿಕೆಯಾಗಿದ್ದು, 5,341 ಸಂಪರ್ಕ ಒದಗಿಸಲಾಗಿದೆ. ಬೆಂಗಳೂರು ದಕ್ಷಿಣದಿಂದ 19,413 ಅರ್ಜಿ ಸಲ್ಲಿಕೆಯಾಗಿದ್ದು, 12,275 ಸಂಪರ್ಕ ನೀಡಲಾಗಿದೆ.
ಬೆಂಗಳೂರಿನ ಜೀವನಾಡಿಗಳಾಗಿದ್ದ ಕೆರೆಗಳು ಮಾಯವಾಗಿದ್ದು, ಇದ್ದ ಕೆರೆಗಳು ನಿರ್ವಹಣೆ ಇಲ್ಲದೆ ಹೂಳು ಮತ್ತು ತ್ಯಾಜ್ಯ ನೀರಿನಿಂದ ತುಂಬಿಕೊಂಡಿದ್ದು, ಭವಿಷ್ಯದಲ್ಲಿ ಬೆಂಗಳೂರಿನ ಸ್ಥಿತಿ- ಗತಿಯನ್ನು ನಿರ್ಣಯಿಸಲಿವೆ. ತಜ್ಞರ ಪ್ರಕಾರ ಇರುವ ಕೆರೆಗಳನ್ನು ಆರೋಗ್ಯಕರವಾಗಿ ಪುನರುಜ್ಜೀವನಗೊಳಿಸಿದರೆ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅನಾಹುತಗಳಿಗೆ ಒಂದಷ್ಟು ಪರಿಹಾರ ಸಿಗಬಹುದು.