Menu

ಬಿಡದಿ ಟೌನ್‌ಶಿಪ್: ಭೂಸ್ವಾಧೀನ ಅಧಿಸೂಚನೆ ರದ್ದುಗೊಳಿಸಲು ಹೈಕೋರ್ಟ್‌ಗೆ ಪಿಐಎಲ್‌

ಬಿಡದಿ ಟೌನ್‌ಶಿಪ್ ಯೋಜನೆ ಅನುಷ್ಠಾನಕ್ಕಾಗಿ 516 ಎಕರೆಗೂ ಅಧಿಕ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಜೇಶ್ ಕಂಪ್ಲಾಪುರ ಬಸವಣ್ಣ  ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರೇಟರ್ ಬೆಂಗಳೂರು ಡೆವಲಪ್‌ಮೆಂಟ್ ಅಥಾರಿಟಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ರಾಮನಗರ ಜಿಲ್ಲಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ನಗರಾಭಿವೃದ್ಧಿ ಇಲಾಖೆಯು ಬಿಡದಿ ತಾಲೂಕಿನ ಕೆಂಪಯ್ಯನಪಾಳ್ಯ: 384.22 ಎಕರೆ, ಮಂಡಲಹಳ್ಳಿ: 71.13 ಎಕರೆ, ವಡೇರಹಳ್ಳಿ: 63.10 ಎಕರೆ ಸೇರಿ ಒಟ್ಟು 519 ಎಕರೆ ಕೃಷಿ ಜಮೀನಿನ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ, ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನ ‘ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ’ ಕಡ್ಡಾಯ. ಆದರೆ ರಾಜ್ಯ ಸರ್ಕಾರವು ಮೌಲ್ಯಮಾಪನ ನಡೆಸದೆ, 26 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ಕನ್ಸಲ್ಟೆಂಟ್ ನೇಮಕ ಟೆಂಡರ್ ಪ್ರಕ್ರಿಯೆಯನ್ನು ಅತಿವೇಗವಾಗಿ ಮುಗಿಸಲು ಮುಂದಾಗಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಕೋರ್ಟ್‌ಗೆ ತಿಳಿಸಲಾಗಿದೆ.

ಪ್ರಾದೇಶಿಕ ಅಸಮತೋಲನ ನಿವಾರಿಸುವ ಸಲುವಾಗಿ ರಚಿಸಲಾಗಿದ್ದ ಪ್ರೊ. ಎಂ. ಗೋವಿಂದ ರಾವ್ ಸಮಿತಿಯ ವರದಿಯನ್ನು ರಾಜ್ಯ ಸಚಿವ ಸಂಪುಟವು ಫೆಬ್ರವರಿ 2026 ರಲ್ಲಿ ಅಂಗೀಕರಿಸಿತ್ತು. ಈ ವರದಿಯ ಶಿಫಾರಸಿನ ಪ್ರಕಾರ, ಮುಂದಿನ ಎಲ್ಲಾ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳಿಗೆ ಕೊಂಡೊಯ್ಯಬೇಕಿದೆ. ಸರ್ಕಾರವು ಅದನ್ನು ಬದಿಗೊತ್ತಿ  ಬೆಂಗಳೂರು ಸುತ್ತಮುತ್ತ 12,500 ಕೋಟಿಗೂ ಹೂಡಿಕೆಗೆ ಸಿದ್ಧತೆ ನಡೆಸಿದೆ. ಇದು ಪ್ರಾದೇಶಿಕ ಅಸಮತೋಲನವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಬೆಂಗಳೂರು ನಗರ ಜನಸಂಖ್ಯೆ ಮತ್ತು ನಗರೀಕರಣದಿಂದಾಗಿ ನೀರಿನ ಬಿಕ್ಕಟ್ಟು ಹಾಗೂ ಪರಿಸರ ಮಾಲಿನ್ಯ ಎದುರಿಸುತ್ತಿದೆ. ಮತ್ತೊಂದು ಬೃಹತ್ ಕಾಂಕ್ರೀಟ್ ನಗರವನ್ನು ನಿರ್ಮಿಸಿದರೆ ಹಸಿರು ವಲಯ ಸಂಪೂರ್ಣವಾಗಿ ನಾಶವಾಗಿ ಅಂತರ್ಜಲ ಸಂಪೂರ್ಣವಾಗಿ ಕುಸಿಯಲಿದ್ದು, ಪರಿಸರ ಸಮತೋಲನ ಏರುಪೇರಾಗಲಿದೆ ಎಂದು ವಾದಿಸಲಾಗಿದೆ.

Related Posts

Leave a Reply

Your email address will not be published. Required fields are marked *