ದಪ್ಪಗಿದ್ದಾಳೆಂಬ ಕಾರಣಕ್ಕೆ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಧಾರವಾಡ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ. ಪತಿ ಬಸವರಾಜ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಹೆಂಡತಿ ದಪ್ಪಗಿದ್ದಾಳೆ, ಆಕೆಗೆ ಮಗು ಆಗಲ್ಲ ಎಂದು ದೂಷಿಸುತ್ತಿದ್ದ ಪತಿ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಪ್ರಿಯಾಂಕಾ (29) ಕೊಲೆಯಾದ ಮಹಿಳೆ. ಪತಿ ಬಸವರಾಜ್ ವಡ್ಡರ್ ಹಾಗೂ ಇತರ ಮೂವರು ಕೊಲೆ ಆರೋಪಿಗಳು.
ಪ್ರಿಯಾಂಕಾ ಹಾಗೂ ಬಸವರಾಜ್ ಮದುವೆ 2024ರಲ್ಲಿ ಅದ್ಧೂರಿಯಾಗಿ ನಡೆದಿತ್ತು. ಒಂದೇ ವರ್ಷದಲ್ಲಿ ಪತಿ ಬಸವರಾಜ್ ಮತ್ತು ಕುಟುಂಬಸ್ಥರು ಪ್ರಿಯಾಂಕಾಗೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ವರದಕ್ಷಿಣೆ ಕಿರುಕುಳದ ಜೊತೆಗೆ ಪ್ರಿಯಾಂಕಾ ಕೊಂಚ ದಪ್ಪಗಿದ್ದಾರೆ ಎಂಬ ಕಾರಣ ಬಸವರಾಜ್ ನಿತ್ಯ ಆಡುತ್ತಿದ್ದ, ತುಂಬಾ ದಪ್ಪಗಿದ್ದೀಯಾ, ನೀನು ಮಗು ಹೆರಲಾರೆ ಎಂದು ಚುಚ್ಚಿ ಮಾತನಾಡಿ ಹಿಂಸಿಸುತ್ತಿದ್ದನು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಸೋಮವಾರ ರಾತ್ರಿ ಪತಿ-ಪತ್ನಿ ನಡುವೆ ಇದೇ ವಿಷಯವಾಗಿ ಜಗಳ ನಡೆದಿದೆ. ಬಸವರಾಜ್ ಪ್ರಿಯಾಂಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಸಾವಿನ ಬಗ್ಗೆ ಅನುಮಾನ ಬಂದು ಆಕೆಯ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ನವಲಗುಂದ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳದ ಅಲ್ಲಿ ಪ್ರಕರಣ ದಾಖಲಾಗಿದೆ. ಬಸವರಾಜ್ ಸೇರಿದಂತೆ ಕೊಲೆ ಹಾಗೂ ಕಿರುಕುಳಕ್ಕೆ ಸಾಥ್ ನೀಡಿದ ಆರೋಪದ ಮೇಲೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.


