Menu

ಮಂಗಳೂರಿನಲ್ಲಿ ಮಳೆಗೆ ಮನೆ ಕುಸಿದು ಮೂವರ ಸಾವು

ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಮಂಗಳೂರಿನ ಕಂಕನಾಡಿಯಲ್ಲಿ ಹಳೆಯ ಹಂಚಿನ ಮನೆಯೊಂದರ ಚಾವಣಿ ಹಾಗೂ ಗೋಡೆ ಕುಸಿದು ಬಿದ್ದು, ನಿದ್ದೆಯಲ್ಲಿದ್ದ ಮೂವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಒಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟವರು.

ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅವಶೇಷಗಳ ಅಡಿ ಸಿಲುಕಿ ಒದ್ದಾಡುತ್ತಿದ್ದ ಒಬ್ಬ ಪುರುಷ ಹಾಗೂ ಇಬ್ಬರು ಬಾಲಕಿಯರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಮಂಗಳವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಮನೆಯ ಗೋಡೆಗಳು ತೇವಗೊಂಡು ಈ ದುರಂತ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತಪಟ್ಟವರೆಲ್ಲ ಬಿಹಾರದವರು ಎಂಬುದು ತಿಳಿದುಬಂದಿದೆ. ನಾಲ್ಕು ಕುಟುಂಬಗಳು ಈ ಬಾಡಿಗೆ ಕಟ್ಟಡದಲ್ಲಿ ವಾಸವಿದ್ದಾರೆ. ಲಾಲ್ ಬಾಬು, ಪತ್ನಿ ಇಂದು, ಮಕ್ಕಳಾದ ಅನುಷಾ, ಅಲ್ಕಾ, ಅನಾಮಿಕ ಚೌರಾಸಿಯ, ಪರಿ ಒಂದು ಮನೆಯಲ್ಲಿದ್ದರು. ಅನಾಮಿಕ ಚೌರಾಸಿಯ(8), ಪರಿ (4) ಮೃತಪಟ್ಟಿದ್ದಾರೆ. ಇನ್ನೊಂದು ಮನೆಯಲ್ಲಿ ಬಾಲಕೃಷ್ಣ, ಶಾಂತಾ ದಂಪತಿ ವಾಸವಾಗಿದ್ದರು. ಶಾಂತ (46) ಅಸು ನೀಗಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಘೋಷಣೆ ಮಾಡಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ. ಮನೆ ಮಾಲೀಕರಿಗೆ ಪರಿಹಾರ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ.

ಮನೆ ಮೇಲೆ ತಡೆಗೋಡೆ ಕುಸಿದು ಮೂವರು ಮೃತಪಟಟ್ಟ ವಿಚಾರ ತಿಳಿದ ಸಚಿವ ಯುಟಿ ಖಾದರ್ ದೆಹಲಿ ಪ್ರವಾಸ ಮೊಟಕುಗೊಳಿಸಿ ತ್ವರಿತ ಪರಿಹಾರ ಕ್ರಮಗಳಿಗೆ ಡಿಸಿಗೆ ಸೂಚನೆ‌ ನೀಡಿದ್ದಾರೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Related Posts

Leave a Reply

Your email address will not be published. Required fields are marked *