ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದಾಬಲಗುಂಡಿ ಗ್ರಾಮದಲ್ಲಿ ಬೀದಿ ನಾಯಿಯೊಂದು ದಾಳಿ ನಡೆಸಿದ್ದರಿಂದ ನಾಲ್ಕು ತಿಂಗಳ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಮನೆಯೊಳಗೆ ಮಗು ಮಲಗಿದ್ದ ವೇಳೆ ಪೋಷಕರು ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದಾಗ ಬೀದಿ ನಾಯಿ ನುಗ್ಗಿ ತೊಟ್ಟಿಲಿನಲ್ಲಿ ಮಲಗಿದ್ದ ಮಗುವಿನ ಮೇಲೆ ದಾಳಿ ಮಾಡಿದೆ.
ಮಗುವಿನ ದೇಹದ ಭಾಗಗಳಲ್ಲಿ ಕಚ್ಚಿಗಿ ಗಾಯಗೊಳಿಸಿದೆ. ಮಗುವಿನ ಕೂಗು ಕೇಳಿ ಪೋಷಕರು ಮನೆಗೆ ಬಂದಾಗ ಮಗು ರಕ್ತದ ಮಡುವಿನಲ್ಲಿತ್ತು, ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನೂ ಪ್ರಕರಣ ದಾಖಲಾಗಿಲ್ಲ, ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಅನಿಲ್ ಕುಂಬ್ಳೆ ಜಂಕ್ಷನ್‌ನಲ್ಲಿ ಸಂಭವಿಸಿದ ಹಿಟ್ ಅಂಡ್ ಅಪಘಾತದಲ್ಲಿ 50 ವರ್ಷದ ವ್ಯಕ್ತಿ ಶ್ರೀನಿವಾಸ್ ಸ್ಥಳದಲ್ಲೇ ಅಸು ನೀಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಶುಕ್ರವಾರ ಬೆಳಗಿನ ಜಾವ 4.30ಕ್ಕೆ ಈ ಅಪಘಾತ ನಡೆದಿದೆ. ಶ್ರೀನಿವಾಸ್ ಅವರು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗದಲ್ಲಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 ರಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


