Menu

ಕವಲು ಹಾದಿಯಲ್ಲಿ ಡಿಎಂಕೆ- ಅಣ್ಣಾ ಡಿಎಂಕೆ

ಹೊಸದಾಗಿ ಚುನಾಯಿತರಾಗಿರುವ ಅಣ್ಣಾಡಿಎಂಕೆ ಪಾರ್ಟಿಯ ಕೆಲವರು ವಿಜಯ್ ಜೊತೆ ಹೋಗಲು ನಿರ್ಧರಿಸಿರುವುದು ಗಮನಾರ್ಹ. ಇದು ಪಕ್ಷದ ವಿಭಜನೆಯ ಸಂಕೇತ. ಇದೇ ವೇಳೆ ಇನ್ನು ಕೆಲವರು ತಮ್ಮ ದೀರ್ಘಕಾಲಿನ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಡಿಎಂಕೆ ಮನೆಯ ಕದ ತಟ್ಟಿದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಓರ್ವ ಯುವನಟ ಹೊಸದಾಗಿ ಹುಟ್ಟುಹಾಕಿದ ರಾಜಕೀಯ ಪಾರ್ಟಿ ಅತಿ ಕಡಿಮೆ ಸಮಯದಲ್ಲಿ ಜನತೆಯನ್ನು ತನ್ನತ್ತ ಆಯಸ್ಕಾಂತದಂತೆ ಸೆಳೆದುಕೊಂಡಿರುವುದು ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷದ ನಾಯಕರ ನಿದ್ದೆಗೆಡಿಸಿದೆ.

ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣ ಬದಲಾಗುವ ಹಾದಿಯಲ್ಲಿದೆ. ಮೊನ್ನೆ ನಡೆದ ಚುನಾವಣೆಯ ಫಲಿತಾಂಶ ಡಿಎಂಕೆ ಹಾಗೂ ಅಣ್ಣಾ ಡಿಎಂಕೆ ಪಕ್ಷಗಳನ್ನು ಬಹುವಾಗಿ ಕಾಡಿದೆ. ಸಿನಿಮಾ ನಟ ವಿಜಯ್ ಸಂಪೂರ್ಣ ಗೆಲುವು ಸಾಧಿಸದಿದ್ದರೂ ಚೊಚ್ಚಲ ಪ್ರಯತ್ನದಲ್ಲಿ ಶತಕದಷ್ಟು ಸೀಟುಗಳು ಸಂಪಾದಿಸಿರುವುದು ಈ ಎರಡೂ ಪಕ್ಷಗಳ ರಾಜಕೀಯ ಪಕ್ಷಗಳಿಗೆ ಸವಾಲು ಎಸೆದಿದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ತಮಿಳುನಾಡನ್ನು ತಮ್ಮ ಹಸ್ತಗತ ಮಾಡಿಕೊಳ್ಳಲು ಶತ ಪ್ರಯತ್ನ ಮಾಡಿದರೂ ಈ ಪ್ರಯತ್ನ ಫಲ ನೀಡಿಲ್ಲ. ಒಟ್ಟಿನಲ್ಲಿ ದ್ರಾವಿಡನಾಡಿನಲ್ಲಿ ರಾಷ್ಟ್ರೀಯವಾದಕ್ಕಿಂತಲೂ ಪ್ರಾದೇಶಿಕತೆಯ ಸಂಗತಿಗಳಿಗೆ ಹೆಚ್ಚು ಒಲವು ನೀಡುವುರೆಂಬುದು ಈ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ.

ಕಳೆದ ನಾಲ್ಕು ದಶಕಗಳಿಂದಲೂ ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಹಿಡಿಯುತ್ತಿರುವುದು ಇವೆರೆಡೇ ಪಕ್ಷಗಳು. ಇದಕ್ಕೆ ಇಲ್ಲಿನ ಜನತೆಯ ಅನುಮೋದನೆ ಇಲ್ಲಿಯವರೆಗೂ ಇತ್ತು. ರಾಜಕಾರಣ ನಿಂತ ನೀರಲ್ಲ. ಹಾಗೆಯೇ ಜನತೆಯ ಮನದಾಳ ಮತ್ತು ಮ ನೋಧೋರಣೆಯೂ ಯಾವಾಗಲೂ ಒಂದೇ ವಿಧವಾಗಿ ಇರುವುದೂ ಇಲ್ಲ . ಆದರೆ ಈಗ ಒಂದು ಸೋಲಿನಿಂದ ಡಿಎಂಕೆ ಮತ್ತು ಅಣಾಡಿಎಂಕೆ ಆಲೋಚಿಸುತ್ತಿರುವ ಪರಿಯನ್ನು ಕಂಡಾಗ ಈ ಪಕ್ಷಗಳ ಸಿದ್ಧಾಂತ  ಬದಲಾಗುವ ದಿನಗಳು ಸಮೀಪಿಸಿವೆ ಎಂಬುದು ಸ್ಪಷ್ಟವಾಗುತ್ತಿದೆ. ಪೆರಿಯಾರ್ ಮತ್ತು ಕಾಮರಾಜ್ ನೆಹರೂ ಮತ್ತು ಇಂದಿರಾಗಾಂಧಿ ಅವರ ವಿರುದ್ದ ರಾಜಕೀಯವಾಗಿ ಸೆಣಸಾಡಿದರು. ಕರುಣಾನಿಧಿ ಒಮ್ಮೆ ಕಾಂಗ್ರೆಸ್ ಜೊತೆಗೂಡಿದರೆ, ಮತ್ತೊಮ್ಮೆ ನ್ಯಾಷನಲ್ ಫ್ರಂಟ್ ಜೊತೆ ಕೈ ಜೋಡಿಸಿದ್ದು ಹೊಸದೇನಲ್ಲ. ಹಾಗೆಯೇ ಒಂದು ಕಾಲದಲ್ಲಿ ರಾಜೀವ್‌ಗಾಂಧಿಗೆ ಜೈ ಎಂದ ಎಂಜಿಆರ್ ಮತ್ತು ಜಯಲಲಿತಾ ಕಾಲಾನಂತರ ಎನ್‌ಡಿಎ ಮೈತ್ರಿಕೂಟ ಸೇರಿದ್ದು ಇತಿಹಾಸ.

ಆದರೆ ಇಲ್ಲಿಯವರೆಗೆ ಈ ರಾಜಕೀಯ ಮೇಲಾಟ ಮತ್ತು ರಣತಂತ್ರ ಮುಂದುವರಿದಿದ್ದೇನೋ ಸರಿ. ಇನ್ನು ಮುಂದೆ ಇಂತಹ ರಾಜಕೀಯ ಧೋರಣೆ ಮತ್ತು ನೀತಿಯುಳ್ಳ ಪಾರ್ಟಿಗಳನ್ನು ಜನತೆ ಹೇಗೆ ನಂಬುವರು ಎಂಬ ಮೂಲಭೂತ ಪ್ರಶ್ನೆ ಈಗ ಡಿಎಂಕೆ ಮತ್ತು ಅಣ್ಣಾಡಿಎಂಕೆ ನಾಯಕರ ಮನದಲ್ಲಿ ತಲೆದೋರಿದೆ.

ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ತಮಿಳುನಾಡು ಅಸೆಂಬ್ಲಿಗೆ ಹೊಸದಾಗಿ ಚುನಾಯಿತರಾಗಿರುವ ಅಣ್ಣಾಡಿಎಂಕೆ ಪಾರ್ಟಿಯ ಕೆಲವರು ವಿಜಯ್ ಜೊತೆ ಹೋಗಲು ನಿರ್ಧರಿಸಿರುವುದು ಗಮನಾರ್ಹ. ಇದು ಪಕ್ಷದ ವಿಭಜನೆಯ ಸಂಕೇತ. ಇದೇ ವೇಳೆ ಇನ್ನು ಕೆಲವರು ತಮ್ಮ ದೀರ್ಘಕಾಲಿನ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಡಿಎಂಕೆ ಮನೆಯ ಕದ ತಟ್ಟಿದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಓರ್ವ ಯುವನಟ ಹೊಸದಾಗಿ ಹುಟ್ಟುಹಾಕಿದ ರಾಜಕೀಯ ಪಾರ್ಟಿ ಅತಿ ಕಡಿಮೆ ಸಮಯದಲ್ಲಿ ಜನತೆಯನ್ನು ತನ್ನತ್ತ ಆಯಸ್ಕಾಂತದಂತೆ ಸೆಳೆದುಕೊಂಡಿರುವುದು ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷದ ನಾಯಕರ ನಿದ್ದೆಗೆಡಿಸಿದೆ. ಟಿವಿಕೆ ಪಾರ್ಟಿ ಸಂಪೂರ್ಣ ಮೆಜಾರಿಟಿ ಪಡೆಯದೆ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಈ ಪಕ್ಷ ರಾಜಕೀಯವಾಗಿ ಡಿಎಂಕೆ ಮತ್ತು ಅಣ್ಣಾಡಿಎಂಕೆ ಎರಡೂ ಪಕ್ಷಗಳಿಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿವುದಂತೂ ಖಂಡಿತ.

Related Posts

Leave a Reply

Your email address will not be published. Required fields are marked *