Menu

ಬೆಂಗಳೂರಿನಲ್ಲಿ ಹೂಡಿಕೆ ಮಾಡಿದವರು ಲಾಭ ಮಾಡಿದ್ದಾರೆ, ನಷ್ಟ ಅನುಭವಿಸಿಲ್ಲ: ಡಿಕೆ ಶಿವಕುಮಾರ್

“ಬೆಂಗಳೂರು ಎಲ್ಲಾ ಕ್ಷೇತ್ರದಲ್ಲಿ ದೇಶದ ಇತರೆ ನಗರಗಳಿಗಿಂತ ಮುಂಚೂಣಿಯಲ್ಲಿದೆ. ನಮ್ಮಲ್ಲಿ ಬಂದು ಹೂಡಿಕೆ ಮಾಡಿದ ಪ್ರತಿಯೊಬ್ಬರೂ ಲಾಭ ಪಡೆದಿದ್ದಾರೆ ಹೊರತು ನಷ್ಟ ಅನುಭವಿಸಿಲ್ಲ. ಈ ಕಾರಣಕ್ಕೆ ಬೆಂಗಳೂರಿಗೆ ಬಂದವರು ಮತ್ತೆ ವಾಪಸ್ ಹೋಗಲು ಬಯಸುವುದಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಾನು ಕಳೆದ 35 ವರ್ಷಗಳಿಂದ ಕರ್ನಾಟಕ ಸರ್ಕಾರದ ಭಾಗವಾಗಿದ್ದೇನೆ. 20 ವರ್ಷಗಳ ಹಿಂದೆ ಮಾಜಿ ಪ್ರಧಾನಿ  ವಾಜಪೇಯಿ ಅವರು ಬೆಂಗಳೂರಿಗೆ ಆಗಮಿಸಿ, ಈಗ ಜಾಗತಿಕ ನಾಯಕರು ಮೊದಲು ಬೆಂಗಳೂರಿಗೆ ಬಂದು, ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಬೆಂಗಳೂರು ಜಾಗತಿಕ ನಗರ ಎಂದು ಬಣ್ಣಿಸಿದ್ದಾರೆ” ಎಂದರು.

“ನಾನು ಇತ್ತೀಚೆಗೆ ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ಅನೇಕ ದೇಶಗಳ ಕಂಪನಿಗಳ ಜತೆ ವ್ಯಾಪಾರ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ನಾನು ಹಾಗೂ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಅವರು ಉದ್ದೇಶಪೂರ್ವಕವಾಗಿ ಅಲ್ಲಿ ಸಹಿ ಹಾಕಲಿಲ್ಲ. ಅಲ್ಲಿ ನಾವು ಅನೇಕ ದೇಶಗಳ ಅಧಿಕಾರಿಗಳು ಹಾಗೂ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿದೆವು. ಎಲ್ಲರೂ ಬೆಂಗಳೂರು ಮೂಲಕ ಭಾರತವನ್ನು ನೋಡುತ್ತಿದ್ದಾರೆ” ಎಂದು ಹೇಳಿದರು.

“ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಮಾನವ ಸಂಪನ್ಮೂಲವನ್ನು ದೇಶದ ಬೇರೆ ರಾಜ್ಯ ಅಥವಾ ನಗರಗಳ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅದೇ ಸಭೆಯಲ್ಲಿ ಬೇರೆ ರಾಜ್ಯದ ಮುಖ್ಯಮಂತ್ರಿ ಕೂಡ ಭಾಗವಹಿಸಿ ಅವರ ರಾಜ್ಯದ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಆದರೆ ಅಲ್ಲಿನ ವಿದೇಶಿ ಅಧಿಕಾರಿ ಹಾಗೂ ಉದ್ಯಮಿಗಳಿಗೆ ಸೂಕ್ತವಾಗುವ ಹವಾಮಾನ, ಸಂಸ್ಕೃತಿ ಹೊಂದಿರುವುದು ಬೆಂಗಳೂರು ಮಾತ್ರ” ಎಂದು ವಿವರಿಸಿದರು.

“ನಮ್ಮ ರಾಜ್ಯದಲ್ಲಿ 250 ಇಂಜಿನಿಯರ್ ಕಾಲೇಜು, 1.50 ಲಕ್ಷ ಇಂಜಿನಿಯರ್ ಗಳನ್ನು ಪ್ರತಿ ವರ್ಷ ಸೃಷ್ಟಿ ಮಾಡುತ್ತಿದ್ದೇವೆ. 70 ಮೆಡಿಕಲ್ ಕಾಲೇಜುಗಳಿದ್ದು, ಪ್ರತಿ ವರ್ಷ 14 ಸಾವಿರ ವೈದ್ಯರನ್ನು ತಯಾರು ಮಾಡಲಾಗುತ್ತಿದೆ. ಪ್ರತಿ ಕ್ಷೇತ್ರದಲ್ಲಿ ನಾವು ಮುಂದೆ ಇದ್ದೇವೆ. ದೆಹಲಿಗಿಂತ ಮುಂಚಿತವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಬೆಂಗಳೂರು. 1904ರಲ್ಲೇ ಬೆಂಗಳೂರು ವಿದ್ಯುತ್ ಸಂಪರ್ಕ ಪಡೆದಿತ್ತು. ತಂತ್ರಜ್ಞಾನ, ಏರೋಸ್ಪೆಸ್, ಆವಿಷ್ಕಾರ, ನವೋದ್ಯಮ ಯಾವುದೇ ಕ್ಷೇತ್ರ ಆದರೂ ಬೆಂಗಳೂರು ಮುಂದೆ ಇದೆ. ನಾವು ತಂದಿರುವ ವಿವಿಧ ಕ್ಷೇತ್ರಗಳ ನೀತಿಗಳು ನಾವೆಲ್ಲರೂ ಜತೆಗೂಡಿ ಕೆಲಸ ಮಾಡೋಣ” ಎಂದು ಕರೆ ನೀಡಿದರು.

“ನಾವು ಈ ಕಾರ್ಯಕ್ರಮಕ್ಕೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿತು. ಇಲ್ಲಿ ಬೆಂಗಳೂರಿಗಿಂತ ಹೆಚ್ಚು ಸಂಚಾರ ದಟ್ಟಣೆ ಇದೆ. ಆದರೆ ಬೆಂಗಳೂರು ಹೆಚ್ಚು ಸದ್ದು ಮಾಡುತ್ತದೆ. ಬೆಂಗಳೂರು ನಗರದ ಸಚಿವನಾಗಿ ನಾವು ಟನಲ್ ರಸ್ತೆ, ಮೇಲ್ಸೇತುವೆ ಸೇರಿದಂತೆ ಅನೇಕ ಯೋಜನೆ ಕೈಗೊಂಡಿದ್ದೇವೆ. ನಮ್ಮ ಮೇಲೆ ವಿಶ್ವಾಸವಿಡಿ” ಎಂದರು.

“ನಮ್ಮಲ್ಲಿ ಸುಸ್ಥಿರ ಸರ್ಕಾರ ಇದೆ. ಕೇಂದ್ರ ಸರ್ಕಾರದ ಜೊತೆಗೆ ರಾಜಕೀಯವಾಗಿ ಎಷ್ಟೇ ವಿರೋಧ ಇದ್ದರು, ದೇಶದ ವಿಚಾರ ಬಂದಾಗ ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಜೊತೆಯಾಗಿ ಕೆಲಸ ಮಾಡುತ್ತೇವೆ. ನಿಮಗೆ ಅಗತ್ಯವಾದ ನೆರವು ನೀಡಲು ನಾವು ಬದ್ಧವಾಗಿದ್ದೇವೆ” ಎಂದು ತಿಳಿಸಿದರು.

“ಬೆಂಗಳೂರು ವಿಶ್ವದಲ್ಲೇ ಅತಿ ಹೆಚ್ಚು ತಂತ್ರಜ್ಞಾನ ಕ್ಲಸ್ಟರ್ ಹೊಂದಿರುವ ನಾಲ್ಕನೇ ನಗರವಾಗಿದೆ. ಸಿಲಿಕಾನ್ ವ್ಯಾಲಿಯಲ್ಲಿ 13 ಲಕ್ಷ ಇಂಜಿನಿಯರ್ ಗಳು ಇದ್ದರೆ, ಕರ್ನಾಟಕದಲ್ಲಿ 26 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದಾರೆ. ಬೆಂಗಳೂರು ನಗರದಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು ಇದ್ದಾರೆ. ದೆಹಲಿಯಲ್ಲೂ ಇಷ್ಟು ಪ್ರಮಾಣದಲ್ಲಿ ಇಲ್ಲ. ಬೆಂಗಳೂರಿಗೆ ಬನ್ನಿ ಒಟ್ಟಾಗಿ ಕೆಲಸ ಮಾಡೋಣ. ಉತ್ತಮ ಭವಿಷ್ಯ ರೂಪಿಸೋಣ” ಎಂದು ಆಹ್ವಾನ ನೀಡಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ವಿಶ್ವದ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ನವೆಂಬರ್ ನಲ್ಲಿ ನಡೆದ ಟೆಕ್ ಸಮಿಟ್ ನಲ್ಲಿ 100 ದೇಶಗಳ 60 ಸಾವಿರ ಉದ್ಯಮಿಗಳು ಭಾಗವಹಿಸಿದ್ದರು. ಎಲ್ಲರಿಗೂ ಬೆಂಗಳೂರಿನ ಮೇಲೆ ವಿಶ್ವಾಸ ಇಟ್ಟಿದ್ದಾರೆ” ಎಂದರು.

ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಅನುಮೋದನೆ ಪಡೆಯಲು ವಿಫಲವಾಗಿರುವ ಬಗ್ಗೆ ಕೇಳಿದಾಗ, “ಈ ಮಸೂದೆ ಮಂಡನೆ ಮಾಡುವ ಮುನ್ನ ಕೇಂದ್ರ ಸರ್ಕಾರ ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕಿತ್ತು. ಇದು ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ ವಿಚಾರವಲ್ಲ. ದೇಶಕ್ಕೆ ಸಂಬಂಧಿಸಿದ ವಿಚಾರ. ಮಹಿಳಾ ಮೀಸಲಾತಿ ಜಾರಿಗೆ ಈ ಹಿಂದೆಯೇ ಎಲ್ಲಾ ರಾಜಕೀಯ ಪಕ್ಷಗಳು ಒಪ್ಪಿದ್ದವು. ಆದರೆ ಚುನಾವಣೆ ಸಮಯದಲ್ಲಿ ಕೇಂದ್ರ ಸರ್ಕಾರ ತರಾತುರಿ ಮಾಡಿದ್ದು ಯಾಕೆ? ಕ್ಷೇತ್ರ ಮರುವಿಂಗಡಣೆ ಮೂಲಕ ದಕ್ಷಿಣ ರಾಜ್ಯಗಳ ಕ್ಷೇತ್ರಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿಲ್ಲ. ಇಂತಹ ಮಸೂದೆಗಳು ಮಂಡಿಸುವಾಗ ಒಗ್ಗಟ್ಟು ಪ್ರದರ್ಶಿಸಬೇಕು. ಇದು ಎನ್ ಡಿಎ ಅಥವಾ ಬಿಜೆಪಿ ಘನತೆ ವಿಚಾರ ಮಾತ್ರವಲ್ಲ. ದೇಶದ ಘನತೆ ವಿಚಾರ. ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಆಗ ಅವರು ಬೆಂಬಲ ನೀಡಲಿಲ್ಲ. ಈಗ ಈ ವಿಚಾರವಾಗಿ ಚರ್ಚೆ ಮಾಡಲು ಸರ್ವಪಕ್ಷ ಸಭೆ ಕರೆಯಲು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಆಗ್ರಹಿಸಿದ್ದರೂ ಕೇಂದ್ರ ಸರ್ಕಾರ ಸಭೆ ಕರೆಯಲಿಲ್ಲ. ದಕ್ಷಿಣ ರಾಜ್ಯಗಳ ಮೇಲೆ ದಬ್ಬಾಳಿಕೆ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *