ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಿವಶಂಕರಪ್ಪ ಅವರು ಹಾಗೂ ಅವರ ಮಗ ಅನೇಕ ವರ್ಷಗಳಿಂದ ರಾಜಕೀಯದಲ್ಲಿ ಇದ್ದಾರೆ. ಇದು ಎಲ್ಲಾ ಪಕ್ಷಗಳಲ್ಲಿ ಇದೆ. ಯಡಿಯೂರಪ್ಪ, ಅವರ ಇಬ್ಬರು ಮಕ್ಕಳು ರಾಜಕೀಯದಲ್ಲಿ ಇಲ್ಲವೇ, ಜನತಾ ದಳದಲ್ಲಿ ಒಂದೇ ಕುಟುಂಬದ ಐದಾರು ಜನ ಇಲ್ಲವೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ಕೇವಲ ಒಂದು ಕುಟುಂಬ ರಾಜಕೀಯವಾಗಿ ಶಕ್ತಿಶಾಲಿಯಾಗಿದೆ ಎಂಬ ಬಿಜೆಪಿಯ ಪ್ರಚಾರದ ಬಗ್ಗೆ ಮಾಧ್ಯಮದವರು ಕೇಳಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು. ಕೇರಳದಲ್ಲಿ ಚುನಾವಣೆ ಪರಿಸ್ಥಿತಿ ಬಗ್ಗೆ ಕೇಳಿದಾಗ, “ಇಂಡಿಯಾ ಮೈತ್ರಿಕೂಟ ಅಲ್ಲಿ ಗೆಲ್ಲುವ ವಿಶ್ವಾಸವಿದೆ. ಬೆಲೆ ಏರಿಕೆ ಹಾಗೂ ಇತರೆ ವಿಚಾರಗಳಿಂದಾಗಿ ಜನ ಪರದಾಡುತ್ತಿದ್ದು, ಬದಲಾವಣೆ ಬಯಸಿದ್ದಾರೆ” ಎಂದು ಉತ್ತರಿಸಿದರು.
ಚುನಾವಣೆ ಬಳಿಕ ಸಿಎಂ ಕುರ್ಚಿಗೆ ಕಚ್ಚಾಟ ನಡೆಯಲಿದೆ ಎಂಬ ಬೊಮ್ಮಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಪಕ್ಷದಲ್ಲಿನ ಅನುಭವದಿಂದ ಈ ರೀತಿ ಹೇಳಿರಬಹುದು. ಕಾಂಗ್ರೆಸ್ ಪಕ್ಷದಲ್ಲಿ ನಾವೆಲ್ಲರೂ ಒಟ್ಟಾಗಿದ್ದು, ಹೈಕಮಾಂಡ್ ತೀರ್ಮಾನ ಎಲ್ಲರೂ ಒಪ್ಪುತ್ತೇವೆ. ಸೂಕ್ತ ಸಮಯದಲ್ಲಿ ಹೈಕಮಾಂಡ್ ನಾಯಕರು ನಿರ್ಧಾರ ಮಾಡಿ ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ” ಎಂದರು.
ನಿಮಗೆ ಹೈಕಮಾಂಡ್ ನಾಯಕರು ದೆಹಲಿಗೆ ಕರೆಯುವುದು ಯಾವಾಗ ಎಂದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ತಿಳಿಸಿದರು. “ದಾವಣಗೆರೆ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಶಾಮನೂರು ಶಿವಶಂಕರಪ್ಪ ಹಾಗೂ ಹೆಚ್.ವೈ. ಮೇಟಿ ಅವರ ಕೊಡುಗೆ ಅದ್ಭುತವಾಗಿದೆ” ಎಂದು ಶಿವಕುಮಾರ್ ಬಣ್ಣಿಸಿದರು.
ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಕುರಿತು ಕೇಳಿದಾಗ, “ಶಿವಶಂಕರಪ್ಪ ಹಾಗೂ ಮೇಟಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಶಾಸಕರಾಗಿ, ಸಚಿವರಾಗಿ ಹಾಗೂ ಸಂಸದರಾಗಿ ಅವರು ಕೆಲಸ ಮಾಡಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ನಾನು ಸಂಚಾರ ಮಾಡಿದ್ದು, ಬೆಂಗಳೂರಿಗಿಂತ ಉತ್ತಮವಾಗಿ ಅಭಿವೃದ್ಧಿ ಹೊಂದಿವೆ. ಈ ನಾಯಕರ ಕೊಡುಗೆ ಬಗ್ಗೆ ನನಗೆ ಹೆಮ್ಮೆ ಇದೆ” ಎಂದರು.
“ಸಮಾಜದ ಎಲ್ಲಾ ವರ್ಗದವರು ಇವರ ಕೆಲಸದಿಂದ ಸಂತೋಷವಾಗಿದ್ದಾರೆ. ನಾನು ಇಲ್ಲಿ ಅಲ್ಪಸಂಖ್ಯಾತ ನಾಯಕರನ್ನು ಭೇಟಿ ಮಾಡಿದೆ. ಅವರಿಗೆ ಏನೇ ತೊಂದರೆ ಆದರೂ ಅವರಿಗೆ ಸ್ಪಂದಿಸುತ್ತಿದ್ದ ಒಂದು ಕುಟುಂಬ ಎಂದರೆ ಅದು ಶಿವಶಂಕರಪ್ಪ ಅವರ ಮನೆ. ಇದು ಈ ಕ್ಷೇತ್ರದ ಜನ ಅವರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಈ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದು ಬಹಳ ಸಂತೋಷವಾಗಿದೆ” ಎಂದು ಹೇಳಿದರು.
“ನಾನು ಅಸ್ಸಾಂ ಹಾಗೂ ಕೇರಳ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ. ಇಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ವರ್ಷ 60,000 ಕೋಟಿ ರೂಪಾಯಿಗಳನ್ನು ಜನರಿಗಾಗಿ ವಿನಿಯೋಗಿಸುತ್ತಿದೆ. ನಮ್ಮ ಗ್ಯಾರಂಟಿ ಸಮಿತಿ ಸದಸ್ಯರುಗಳು ಕ್ಷೇತ್ರದ ಪ್ರತಿ ಮನೆಮನೆಗೂ ಭೇಟಿ ನೀಡಿದ್ದು ಸರ್ಕಾರ ನೀಡಿರುವ ಯೋಜನೆಗೆ ಬೆಂಬಲ ನೀಡಲು ಜನರು ತೀರ್ಮಾನಿಸಿದ್ದಾರೆ. ಅಸ್ಸಾಂನಲ್ಲಿ ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಆದರೆ ನಾವು ಸಮಾಜದ ಎಲ್ಲಾ ವರ್ಗದವರಿಗೂ ಪಕ್ಷ ಭೇದ ಮರೆತು ಯೋಜನೆಗಳನ್ನು ನೀಡುತ್ತಿದ್ದೇವೆ. ಇದೇ ಕಾರಣಕ್ಕೆ ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂನಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಭೂಮಿ ಹಕ್ಕು, ಪಿಂಚಣಿ ಸೇರಿದಂತೆ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ” ಎಂದು ತಿಳಿಸಿದರು.
ಕರ್ನಾಟಕದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಕೇಳಿದಾಗ, ” ಗ್ಯಾರೆಂಟಿ ಯೋಜನೆಗಳ ಸೃಷ್ಟಿಕರ್ತರೆ ನಾವು. ಇಂದು ಬೆಲೆ ಏರಿಕೆ ಅತ್ಯಂತ ಗಂಭೀರ ಸ್ವರೂಪದಲ್ಲಿದೆ. ಇಂಧನ ತೈಲಗಳಿಂದ ಹಿಡಿದು ಅಡುಗೆ ಅನಿಲ, ರೈತರು ಬಳಸುವ ಹಿಟನಾಶಕ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಅನಿಲದ ಕೊರತೆಯಿಂದಾಗಿ ಜನ ಮತ್ತೆ ಸೌದೆ ಒಲೆಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇಂದ್ರ ಸರ್ಕಾರದ ವೈಫಲ್ಯವಾಗಿದ್ದು, ಜನರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆವು. ನಮ್ಮ ಯೋಜನೆಯಿಂದ ಜನರು ತೃಪ್ತಿಯಾಗಿದ್ದಾರೆ ಎಂಬ ವಿಶ್ವಾಸ ನಮಗಿದೆ” ಎಂದು ಉತ್ತರಿಸಿದರು.


