ವಿಮಾನ ನಿಲ್ದಾಣದಲ್ಲಿ ಹತ್ತು ರೂಪಾಯಿಗೆ ಚಹಾ ಕುಡಿಯುವಂತೆ ಮಾಡುವುದರಿಂದ ಹಿಡಿದು, ಡೆಲಿವರಿ ಬಾಯ್‌ಗಳವರೆಗಿನ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಎತ್ತುತ್ತಿದ್ದ ಆಪ್ ಸದಸ್ಯ ರಾಘವ್ ಚಡ್ಡಾ ಅವರನ್ನು ಪಕ್ಷವೇ ರಾಜ್ಯಸಭಾ ಉಪನಾಯಕ ಸ್ಥಾನದಿಂದ ವಜಾಗೊಳಿಸಿದೆ.
ರಾಜ್ಯಸಭೆಯಲ್ಲಿ ಚಡ್ಡಾ ಮಾತನಾಡುವ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಅವರ ಸ್ಥಾನದಲ್ಲಿ ಆಮ್ ಆದ್ಮಿ ಪಕ್ಷವು ಹೊಸ ಉಪನಾಯಕನಾಗಿ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಕಗೊಳಿಸುತ್ತಿದೆ. ಈ ಸಂಬಂಧ ಆಪ್ ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದೆ.
ಕೆಲವು ವಿಷಯಗಳ ಬಗ್ಗೆ ಸರಿಯಾದ ಕಾಳಜಿಯಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಪಕ್ಷದ ಹೈಕಮಾಂಡ್ ಅವರಿಗೆ ಎಚ್ಚರಿಕೆ ನೀಡಿತ್ತು ಎಂದು ಮೂಲಗಳು ತಿಳಿಸಿವೆ. ರಾಜ್ಯಸಭೆಯಲ್ಲಿ ಯಾವ ವಿಷಯವನ್ನು ಎತ್ತುತ್ತಾರೆ ಎಂಬುದರ ಬಗ್ಗೆ ಅವರು ಪಕ್ಷಕ್ಕೆ ತಿಳಿಸುತ್ತಿಲ್ಲ ಎಂದೂ ಹೇಳಲಾಗಿದೆ.
ರಾಜ್ಯಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅವರು ನಿರಂತರವಾಗಿ ಧ್ವನಿ ಎತ್ತುತ್ತಿರುವ ಸಮಯದಲ್ಲಿ ಇಂತಹುದ್ದೊಂದು ಕ್ರಮ ಕೈಗೊಂಡಿರುವುದು ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆಮ್ ಆದ್ಮಿ ಪಕ್ಷದ ವಿರುದ್ಧ ಮಾತನಾಡಿದ ಆರೋಪ ರಾಘವ್ ಚಡ್ಡಾ ಅವರ ಮೇಲಿದೆ. ರೌಸ್ ಅವೆನ್ಯೂ ನ್ಯಾಯಾಲಯವು ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಖುಲಾಸೆಗೊಳಿಸಿದಾಗ ರಾಘವ್ ಚಡ್ಡಾ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿಲ್ಲ. ಪಕ್ಷದ ಕೋಟಾದಿಂದ ಅವರಿಗೆ ನೀಡಲಾದ ಸಮಯದಲ್ಲಿ ರಾಘವ್ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದರು. ಪಕ್ಷದ ಇತರ ಸಂಸದರಿಗೆ ಅವಕಾಶ ಸಿಗಲಿಲ್ಲ. ಅವರು ಪಕ್ಷದ ನಿಲುವನ್ನು ಸರಿಯಾಗಿ ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ ಅಥವಾ ಪಕ್ಷದ ವಿಷಯಗಳ ಕುರಿತು ಮಾತನಾಡುವುದನ್ನು ತಪ್ಪಿಸಿದರು ಎಂಬ ದೂರುಗಳು ಚಡ್ಡಾ ಮೇಲಿವೆ.
ವಿಮಾನ ನಿಲ್ದಾಣದಲ್ಲಿ ಚಹಾ ದುಬಾರಿಯಾಗಿದ್ದು, ಸಾಮಾನ್ಯ ಗ್ರಾಹಕರ ಕೈಗೆಟುಕುತ್ತಿರಲಿಲ್ಲ, ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿ ಅದನ್ನು ಹತ್ತು ರೂಪಾಯಿಗೂ ಕುಡಿಯಬಹುದು ಎಂಬಂತೆ ಮಾಡಿದ್ದರು. ಅಎಲಿಕಾಂ ಕಂಪೆನಿಗಳು ಇಪ್ಪತ್ತೆಂಟು ದಿನಗಳ ರೀ ಚಾರ್ಜ್ ಅನ್ನು ಒಂದು ತಿಂಗಳು ಎಂದು ಪರಿಗಣಿಸಿ ಗ್ರಾಹಕರನ್ನು ವಂಚಿಸುತ್ತ ಬಂದಿರುವುದರ ಬಗ್ಗೆಯೂ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ, ಆ ವಂಚನೆ ತಡೆಗೆ ಆಗ್ರಹಿಸಿದ್ದರು. ಜೀವವಿಮೆಯು ಐಷಾರಾಮಿ ಸರಕು ಅಥವಾ ಸೇವೆಯಲ್ಲ, ಅದು ಎಮರ್ಜೆನ್ಸಿಗೆ ಬೇಕಾದ ಅಗತ್ಯ ಎಂದು ಪ್ರತಿಪಾದಿಸಿ ಅದರ ಮೇಲಿನ ತೆರಿಗೆಯನ್ನು ವಜಾಗೊಳಿಸುವ ಕೆಲಸ ಕೂಡ ಮಾಡಿದ್ದರು. ಹೀಗೆ ಜನ ಸಾಮಾನ್ಯರಿಗೆ ನೆರವಾಗುವ ಹತ್ತು ಹಲವು ವಿಚಾರಗಳನ್ನು ರಾಜ್ಯ ಸಬೆಯಲ್ಲಿ ಸೊಪಷ್ಟವಾಗಿ ಮತ್ತು ಪ್ರಖರವಾಗಿ ಮಂಡಿಸಿ ಗಮನ ಸೆಳೆದಿದ್ದರು.


