Menu

ಹಿಂದಿಯಲ್ಲಿ ಗ್ರೇಡ್‌: ಸರ್ಕಾರದ ನಿರ್ಧಾರ ಪ್ರಶ್ನಿಸಿ ಪಿಐಎಲ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಬೆಂಗಳೂರಿನ ಹೆಚ್.ಎನ್. ಚಂದನಾ ಮತ್ತು ಎಸ್.ವೆಂಕಟೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಆಯುಕ್ತರು, ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರನ್ನು ಪ್ರತಿವಾದಿಗಳಾಗಿದ್ದಾರೆ. ಸರ್ಕಾರದ ಕ್ರಮ ಸರಿಯಾಗಿಲ್ಲ. ಯಾವುದೇ ಶೈಕ್ಷಣಿಕ ಬದಲಾವಣೆ ಮಾಡುವ ಮುನ್ನ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಯಾವುದೇ ಪ್ರಕ್ರಿಯೆ ಮಾಡದೇ ಏಕಪಕ್ಷೀಯ ನಿರ್ಧಾರ ಮಾಡಿರೋದು ಸೂಕ್ತ ಅಲ್ಲ ಎಂದು ದೂರಿದ್ದಾರೆ.

ವಿದ್ಯಾರ್ಥಿಗಳಿಗೆ ಹಿಂದಿ ಉತ್ತೀರ್ಣತೆ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಹಿನ್ನೆಲೆ ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಮಾತ್ರ ಒಳಗೊಂಡ ‘ದ್ವಿಭಾಷಾ ನೀತಿ’ ಜಾರಿಗೆ ತರಲು ಈ ಹಿಂದೆ ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗ ಶಿಫಾರಸು ಮಾಡಿತ್ತು.

ತೃತೀಯ ಭಾಷೆ ಹಿಂದಿಯನ್ನು ರದ್ದು ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರ ಮಕ್ಕಳ ಬದುಕಿಗೆ ಕಲ್ಲು ಹಾಕಿದೆ. ಕನ್ನಡದ ಮೇಲಿನ ಪ್ರೀತಿಯಿಂದ ಸರ್ಕಾರ ಈ ತೀರ್ಮಾನ ಮಾಡಿಲ್ಲ. ಇದು ಕೇವಲ ಕುಟಿಲ ರಾಜಕಾರಣ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಿಂದ ಏಕಾಏಕಿ ತೃತೀಯ ಭಾಷೆ ಹಿಂದಿಯನ್ನು ತೆಗೆದುಹಾಕಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ಸಮಯದಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಹಿಂದಿ ಪಾಠ ಓದಿ ಅಭ್ಯಾಸ ಮಾಡಿದ್ದಾರೆ. ಈಗ ದಿಢೀರನೆ ಈ ತೀರ್ಮಾನ ಕೈಗೊಂಡಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದರು.

Related Posts

Leave a Reply

Your email address will not be published. Required fields are marked *