ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಬಕೆಟ್ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು, ಮಗುವಿನ ಸಾವಿಗೆ ನಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ನೊಂದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡವರು, ಅವರ 11 ತಿಂಗಳ ಗಂಡು ಮಗು ಅಗಸ್ತ್ಯ ಬಕೆಟ್ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಪ್ರತಿಭಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಹೋಗಿದ್ದಾಗ ಮಗು ಆಟವಾಡುತ್ತ ಬಚ್ಚಲು ಮನೆಗೆ ಹೋಗಿ ಬಕೆಟ್ ನೀರಲ್ಲಿ ಮುಳುಗಿದೆ.
ಕೆಳಗೆ ಬಂದ ಪ್ರತಿಭಾಗೆ ಮಗು ಮೃತಪಟ್ಟಿರುವುದು ಖಚಿತವಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಪತಿ ಮಹಾಂತೇಶ್ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಮ್ಮ ಬಳಿಯಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಹೋದಾಗ ಪ್ರತಿಭಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು.
‘ನನ್ನ ಮಗುವಿನ ಸಾವಿಗೆ ನಾನೇ ಕಾರಣ, ಅವನನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪ್ರತಿಭಾ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರು. ಪ್ರತಿಭಾ 15 ಮಾತ್ರೆಗಳನ್ನು ನುಂಗಿ, ಕೈ ಕುಯ್ದುಕೊಂಡು ಸಾಯುವುದಕ್ಕೆ ಯತ್ನಿಸಿದ್ದರು. ರಕ್ತ ಬಾರದ ಕಾರಣ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಚಂದ್ರಾಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


