ಚಿತ್ರದುರ್ಗ ಹೊಳಲ್ಕೆರೆ ಪಟ್ಟಣದಲ್ಲಿ ಪ್ರಾಧ್ಯಾಪಕರೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ ನಡೆಸಿದ್ದಕ್ಕೆ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಲ್ಲಾಡಿಹಳ್ಳಿಯ ಆಯುರ್ವೇದ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಲಿಖಿತಾ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್ನ ಮನೆಯಲ್ಲಿ ಲಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಾಧ್ಯಾಪಕ ಡಾ. ರಾಜು ಅವರೊಂದಿಗೆ ಸಂಬಂಧವಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದರಿಂದ ನೊಂದು ಆಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಲಿಖಿತಾ ಬರೆದಿಟ್ಟಿರುವ ಡೆತ್ ನೋಟ್ನಲ್ಲಿ ಪ್ರಾಧ್ಯಾಪಕ ಡಾ. ರಾಜು, ಅವರ ಪತ್ನಿ ನಿಶಾ ಹಾಗೂ ಕೆಲವು ವಿದ್ಯಾರ್ಥಿನಿಯರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಇವರ ಕಿರುಕುಳ ಮತ್ತು ಅಪಪ್ರಚಾರವೇ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಧ್ಯಾಪಕ ರಾಜು, ಪತ್ನಿ ನಿಶಾ ಮತ್ತು ಡೆತ್ ನೋಟ್ನಲ್ಲಿ ಹೆಸರಿಸಲಾದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಕ್ರಮ ಸಂಬಂಧ: ಮಹಿಳೆ ಮೇಲೆ ಆಸಿಡ್ ದಾಳಿ
ಕೋಲಾರದ ಆಜಾದ್ ನಗರದಲ್ಲಿ ಅಕ್ರಮ ಸಂಬಂಧದ ಆರೋಪ ಹಿನ್ನೆಲೆಯಲ್ಲಿ ನಡೆದ ರಾಜಿ ಸಂಧಾನ ವಿಕೋಪಕ್ಕೆ ತಿರುಗಿ, ಮಹಿಳೆಯೊಬ್ಬಳು ತನ್ನ ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯ ಮೇಲೆ ಆಸಿಡ್ ಎರಚಿದ್ದಾಳೆ. ಮುಸ್ಕಾನ್ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿ ಆಯೇಷಾ ಹಾಗೂ ಮುಸ್ಕಾನ್ ಸಂಬಂಧಿಕರು. ಆಯೇಷಾಳ ಪತಿ ಶಾಬಾಜ್ ಅಹಮದ್ನ ತಮ್ಮನ ಪತ್ನಿ ಮುಸ್ಕಾನ್. ಮುಸ್ಕಾನ್ ಪತಿ ಕುಡಿತದ ವ್ಯಸನಿಯಾಗಿದ್ದು, ಶಾಬಾಜ್ ಅಹಮದ್ ಹಣಕಾಸಿನ ನೆರವು ನೀಡುತ್ತಿದ್ದ. ಆ ನೆಪದಲ್ಲಿ ಮುಸ್ಕಾನ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದ ಎಂಬ ಆರೋಪವಿದೆ.
ಮೂರು ತಿಂಗಳ ಹಿಂದೆ ಮುಸ್ಕಾನ್ ಮತ್ತು ಶಾಬಾಜ್ ಅಹಮದ್ ಓಡಿಹೋಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಸಂಬಂಧಿಕರು ಕೋಲಾರಕ್ಕೆ ಕರೆತಂದಿದ್ದರು. ಸಂಬಂಧಿಕರ ಮನೆಯೊಂದರಲ್ಲಿ ‘ರಾಜಿ ಪಂಚಾಯ್ತಿ’ ಹಮ್ಮಿಕೊಳ್ಳಲಾಗಿತ್ತು. ಆಕ್ರೋಶಗೊಂಡ ಆಯೇಷಾ ಬಾತ್ ರೂಂ ಕ್ಲೀನಿಂಗ್ ಆಸಿಡ್ ಅನ್ನು ಮುಸ್ಕಾನ್ ಮುಖಕ್ಕೆ ಎರಚಿ ಪರಾರಿಯಾಗಿದ್ದಾಳೆ.
ವಿಷಯ ತಿಳಿದ ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಸ್ಕಾನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಆಯೇಷಾಳನ್ನು ಪೊಲೀಸರುವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.


