ಉಗ್ರ ಸಿದ್ಧಾಂತಗಳನ್ನು ಆನ್‌ಲೈನ್ ಮೂಲಕ ಪ್ರಚಾರ ಮಾಡುತ್ತಿದ್ದಾನೆಂಬ ಗಂಭೀರ ಆರೋಪದ ಮೇಲೆ ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರ ವಿಶೇಷ ತಂಡವು ಬಳ್ಳಾರಿ ನಗರದಲ್ಲಿ ಲಾರಿ ಚಾಲಕನನ್ನು ಬಂಧಿಸಿದೆ.
ಬಂಧಿತನನ್ನು ನಗರದ ಕೌಲ್ ಬಜಾರ್ ಪ್ರದೇಶದ ಅಬ್ದುಲ್ ಕಲಾಂ ಬೀದಿಯ ನಿವಾಸಿ ಅಬ್ದುಲ್ ಸಲಾಂ (36) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಲಾರಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಗೌಪ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವಿಜಯವಾಡ ಪೊಲೀಸರು ಬಳ್ಳಾರಿಗೆ ಆಗಮಿಸಿ ಕೌಲ್ ಬಜಾರ್ ಪೊಲೀಸರ ನೆರವಿನಿಂದ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಬಳಿಕ ವಿಜಯವಾಡಕ್ಕೆ ಕರೆದೊಯ್ದಿದ್ದಾರೆ. ಆರೋಪಿಯು ಉಗ್ರ ಸಿದ್ಧಾಂತಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದನೆಂಬ ಆರೋಪ ಕೇಳಿಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ, ಅಬ್ದುಲ್ ಸಲಾಂ ಆನ್‌ಲೈನ್ ವೇದಿಕೆಗಳ ಮೂಲಕ ಮೂಲಭೂತವಾದಿ ಚಿಂತನೆಗಳನ್ನು ಆನ್ ಲೈನ್ ಮೂಲಕ ಹರಿ ಬಿಡುತ್ತಿದ್ದನು ಎಂಬ ಮಾಹಿತಿ ಬಹಿರಂಗವಾಗಿದೆ. ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಂಬ ಅನುಮಾನವೂ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ವಿದೇಶಿ ಉಗ್ರ ಅಲ್ ಹಕೀಮ್ ಸುಕೂರ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಾನೆಂದು ಶಂಕಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರವಾದದ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದನೆಂಬ ಅಂಶವೂ ತನಿಖೆಯಲ್ಲಿ ಹೊರಬಂದಿದೆ ಎಂದು ಹೇಳಲಾಗಿದೆ. ಜಿಹಾದ್ ಪರಿಕಲ್ಪನೆಗಳನ್ನು ಪ್ರಚಾರ ಮಾಡುವ ಗುಂಪುಗಳೊಂದಿಗೆ ಸಹ ಈತನ ಸಂಪರ್ಕವಿದ್ದ ಎನ್ನುವುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆಂದು ಹೇಳಲಾಗಿದೆ.
ಪ್ರಕರಣದ ಹಿನ್ನಲೆಯಲ್ಲಿ ಇನ್ನಷ್ಟು ಆರೋಪಿಗಳು ಅಥವಾ ಜಾಲ ಬಯಲಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆ ಹಿನ್ನೆಲೆ ಬಳ್ಳಾರಿ ನಗರದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಸಂಶಯಾಸ್ಪದ ಚಟುವಟಿಕೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ವಿಜಯವಾಡ ಪೊಲೀಸರು ಈ ಪ್ರಕರಣ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.


