ವೀಸಾ ಅವಧಿ ಮೀರಿ ವಾಸಿಸುತ್ತಿರುವ 588 ವಿದೇಶಿಗರಲ್ಲಿ, ಹೆಚ್ಚಿನವರು ಬೆಂಗಳೂರು ನಗರದಲ್ಲೇ 542 ಮಂದಿ ಪತ್ತೆಯಾಗಿದ್ದಾರೆ. ಇನ್ನುಳಿದಂತೆ ಮೈಸೂರಿನಲ್ಲಿ 26, ಮಂಗಳೂರಿನಲ್ಲಿ 1, ಹುಬ್ಬಳ್ಳಿ-ಧಾರವಾಡದಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 11, ರಾಮನಗರದಲ್ಲಿ 4, ಉತ್ತರ ಕನ್ನಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರು ಇದ್ದಾರೆಂದು ಗೈಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು 7,953 ವಿದೇಶಿಗರು ಮಾನ್ಯ ವೀಸಾ ಹೊಂದಿದ್ದಾರೆ ಎಂದು ವಿವರಿಸಿದರು. ಅಕ್ರಮವಾಗಿ ದೇಶ ಪ್ರವೇಶಿಸಿದ 531 ವಿದೇಶಿಗರಲ್ಲಿ 439 ಮಂದಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ 330 ಮಂದಿ ಬಾಂಗ್ಲಾದೇಶ, 42 ಮಂದಿ ನೈಜೀರಿಯಾ, 4 ಮಂದಿ ಇರಾನ್, 38 ಮಂದಿ ಶ್ರೀಲಂಕಾ ಮತ್ತು ಒಬ್ಬ ಪಾಕಿಸ್ತಾನದವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 402 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಸಚಿವರು ಹೇಳಿದರು. ವೀಸಾ ಅವಧಿ ಮುಗಿದರೂ 588 ವಿದೇಶಿಗರು ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದು, 531 ಮಂದಿ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ.
ವೀಸಾ ಮತ್ತು ಪಾಸ್‌ಪೋರ್ಟ್ ಅವಧಿ ಮುಗಿದರೂ ವಾಸಿಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ವಿಶೇಷ ಗಮನ ಹರಿಸಲಾಗಿದೆ ಎಂದು
ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಎಸ್‌ಪಿಗಳಿಗೆ ಪ್ರತಿ ತಿಂಗಳು FRRO ಮೂಲಕ ಅಕ್ರಮ ವಿದೇಶಿಗರ ವಿವರ ಸಂಗ್ರಹಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪೊಲೀಸ್ ಠಾಣೆ ಮಟ್ಟದಲ್ಲಿ ಗುಪ್ತಚರ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಿ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಅಕ್ರಮ ವಾಸ ಪತ್ತೆಯಾದಾಗ ಸಂಬಂಧಿಸಿದವರ ವಿವರಗಳನ್ನು ಅವರ ದೇಶಗಳಿಗೆ ಮತ್ತು ವಿದೇಶಾಂಗ ಸಚಿವಾಲಯಕ್ಕೆ ರವಾನಿಸಲಾಗುತ್ತದೆ. ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಸೂಕ್ತ ಸೆಂಟರ್‌ನಲ್ಲಿ ಇರಿಸಲಾಗುತ್ತದೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಗಡಿಪಾರು ಮಾಡಲಾಗುತ್ತದೆ. ಅಕ್ರಮವಾಗಿ ವಾಸಿಸಲು ಸಹಾಯ ಮಾಡುವ ಶಿಕ್ಷಣ ಸಂಸ್ಥೆಗಳು ಮತ್ತು ಇತರರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದು, ಎಚ್ಚರಿಕೆ ನೀಡಿದ್ದಾರೆ.


