-ಬಾಲಚಂದ್ರ ರೂಗಿ
ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳು ಇನ್ನೂವರೆಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಿದೆ.
ಮಾರ್ಚ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಇನ್ನು ಆರು ದಿನ ಮಾತ್ರ ಬಾಕಿ ಉಳಿದಿದ್ದು, ಅಭ್ಯರ್ಥಿಗಳ ಘೋಷಣೆಯಿಲ್ಲದೇ ಪ್ರಚಾರ ಹೇಗೆ ಕೈಗೊಳ್ಳುವುದು ಎಂಬ ಚಿಂತೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರಿದ್ದಾರೆ. ಬಿಜೆಪಿಯಲ್ಲಿ ಈಗಾಗಲೇ ಒಬ್ಬರ ಹೆಸರನ್ನು ಫೈನಲ್ ಮಾಡಿ ಹೈಕಮಾಂಡ್ಗೆ ಕಳಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಯಾಕೆ ಹೆಸರು ಇನ್ನೂ ಅನೌನ್ಸ್ ಮಾಡುತ್ತಿಲ್ಲ ಎಂಬುದು ತಿಳಿಯದಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ನಲ್ಲಿ ಮೇಟಿ ಕುಟುಂಬಕ್ಕೆ ಕೊಡಲು ಪಕ್ಷ ನಿರ್ಧರಿಸುವುದರಿಂದ ಆ ಮನೆಯವರಲ್ಲಿಯೇ ಸಾಕಷ್ಟು ನಾನು ಸ್ಪರ್ಧೆ ಮಾಡುತ್ತೇನೆ, ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಿರುವುದರಿಂದ ಕಾರ್ಯಕರ್ತರಿಗೆ ಯಾರ ಪರ ನಿಲ್ಲಬೇಕು ಎಂಬುದು ತಿಳಿಯದಾಗಿದೆ.
ಬಿಜೆಪಿಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠರ ಟಿಕೆಟ್ ಪಕ್ಕಾ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ನಾಳೆ ಅಥವಾ ನಾಡಿದ್ದು ಘೋಷಣೆಯಾಗಬಹುದು ಎನ್ನಲಾಗುತ್ತಿದೆ.
ಎಲ್ಲರೂ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಅವರಿಗೆ ಬೆಂಬಲಿಸುವುದಾಗಿ ಕಾಂಗ್ರೆಸ್ನ ಎಲ್ಲ ನಾಯಕರು ಹೇಳಿದ್ದಾರೆ. ಆದರೆ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದು, ಸಹೋದರ-ಸಹೋದರಿಯರ ಟಿಕೆಟ್ ಜಗಳ ಈಗ ಬೆಂಗಳೂರು ತಲುಪಿದೆ. ಇದರಿಂದ ಪಕ್ಷ ಯಾವಾಗ ಘೋಷಣೆ ಮಾಡುತ್ತೆ, ತಾವು ಯಾರ ಜತೆಗೆ ನಿಲ್ಲಬೇಕು ಎಂಬ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ.
ಈಗಾಗಲೇ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗಬಹುದು ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಇವರ ಸಹೋದರಿ ಮಹಾದೇವಿ ಮೇಟಿ ತಾನು ಕೂಡ ಆಕಾಂಕ್ಷಿ ಮಾರ್ಚ್ 20ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದು ಸಾಕಷ್ಟು ಚರ್ಚೆಯಾಗಿತ್ತು. ಹೀಗಾಗಿಯೇ ಸಿಎಂ ಮೇಟಿ ಅವರ ನಾಲ್ವರು ಮಕ್ಕಳನ್ನು ಬೆಂಗಳೂರಿಗೆ ಆಹ್ವಾನಿಸಿದ್ದು, ಮಾರ್ಚ್ 18ರಂದು ಬೆಳಗ್ಗೆ 11ಕ್ಕೆ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೇಟಿ ಕುಟುಂಬದವರೇ ಅಧಿಕೃತವಾಗಿ ತಿಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಆಯ್ಕೆ ಈಗ ಸಿಎಂ ಕೈಯಲ್ಲಿದ್ದು, ಅವರು ಆಯ್ಕೆ ಮಾಡುವ ಅಭ್ಯರ್ಥಿಯನ್ನು ಎಲ್ಲರೂ ಒಪ್ಪಿಕೊಳ್ಳುವರೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ನಮ್ಮ ಕುಟುಂಬದವರನ್ನು ಸಿಎಂ ಬೆಂಗಳೂರಿಗೆ ಕರೆದಿದ್ದಾರೆ. ನಾವು ಹೋಗುತ್ತಿದ್ದೇವೆ. ಅಲ್ಲಿ ಆಗುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮಲ್ಲಿಕಾರ್ಜುನ ಮೇಟಿ ಹೇಳಿದಾರೆ.
ಬಿಜೆಪಿ ಟಿಕೆಟ್ ನಾಳೆ ಅಥವಾ ನಾಡಿದ್ದು ಘೋಷಣೆಯಾಗಬಹುದು. ರಾಜ್ಯ ನಾಯಕರು ಸಭೆಯನ್ನು ನಡೆಸಿ ಅಭ್ಯರ್ಥಿಯ ಅಂತಿಮಗೊಳಿಸಿ ದೆಹಲಿಗೆ ಕಳಿಸಿದ್ದು, ಘೋಷಣೆಯಷ್ಟೇ ಬಾಕಿ ಇದೆ. ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬಾಗಲಕೋಟೆ ಉಪಚುನಾವಣೆಗೆ ಸಂಬಂಧಿಸಿದಂತೆ ವೀಕ್ಷಕರ ಸಭೆ ಮಾಡಲಾಗಿದ್ದು, ರಾಜ್ಯ ನಾಯಕರಿಗೆ ಆಕಾಂಕ್ಷಿಗಳ ಹೆಸರು ನೀಡಲಾಗಿದೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಎಸ್.ಜಿ.ನಂಜಯ್ಯನಮಠ ಹೇಳಿದ್ದಾರೆ.


