ವಿವಾಹಿತ ವ್ಯಕ್ತಿ ಲಿವ್ ಇನ್ ಸಂಗಾತಿಯನ್ನು ವೈರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ. ಕೊಡಗಿನ ರಂಜಿತಾ (23) ಕೊಲೆಯಾದ ಮಹಿಳೆ, ಅಯ್ಯಪ್ಪ ಕೊಲೆ ಆರೋಪಿ. ಇವರಿಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರು.
ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿತ್ತು. ಮದುವೆಯಾಗಿರುವ ವಿಷಯ ಮಹಿಳೆಗೆ ತಿಳಿದಿರಲಿಲ್ಲ. ವಿಚಾರ ತಿಳಿದು ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ತಾರಕಕ್ಕೇರಿ ಆರೋಪಿ ವೈಯರ್‌ನಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಪತಿ ಕಣ್ಣೆದುರಲ್ಲೇ ಪತ್ನಿ ಆತ್ಮಹತ್ಯೆ
ಪತಿಯ ಕಣ್ಣೆದುರಲ್ಲೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾಮದಲ್ಲಿ ನಡೆದಿದೆ. ಕೃಷ್ಣವೇಣಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಪತ್ನಿ ನೇಣು ಬಿಗಿದುಕೊಳ್ಳುವಾಗ ಪತಿ ಮೊಬೈಲ್‍ನಲ್ಲಿ ವೀಡಿಯೊ ರೆಕಾರ್ಡ್ ಮಾಡಿದ್ದಾನೆ.
ಪತಿ ಶ್ರೀರಾಮ್ ಶ್ರೀನಿವಾಸ್ ಮತ್ತು ಕೃಷ್ಣವೇಣಿ ಕೌಟುಂಬಿಕ ವಿಚಾರಕ್ಕೆ ಜಗಳವಾಡಿದ್ದರು. ಬಳಿಕ ಆಕೆ ಆತಮ್ಹತ್ಯೆ ಮಾಡಿಕೊಂಡಿದ್ದಾರೆ. ಪತಿ ತಡೆಯಲು ಪ್ರಯತ್ನಿಸುವ ಬದಲು ವೀಡಿಯೊ ರೆಕಾರ್ಡ್ ಮಾಡಿ, ನೀನು ಹಾಗೆ ಕುಣಿಕೆ ಕಟ್ಟಬಾರದು. ಅದನ್ನು ಹೀಗೆ ಮಾಡಬೇಕು ಎಂದು ಸೂಚನೆ ನೀಡಿದ್ದ ಎನ್ನಲಾಗಿದೆ.
ಆರಂಭದಲ್ಲಿ ಪತ್ನಿ ತಮಾಷೆ ಮಾಡುತ್ತಿದ್ದಾಳೆ ಎಂದು ಗ್ರಹಿಸಿದ್ದರಿಂದ ಶ್ರೀನಿವಾಸ್ ಪತ್ನಿಯ ಪ್ರಾಣ ಉಳಿಸಲು ವಿಫಲನಾಗಿದ್ದಾಗಿ ಎಂದು ತಿಳಿದುಬಂದಿದೆ. ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ಪತಿಯು ಲೋಕೋ ಪೈಲಟ್ ಆಗಿ ಕೆಲಸ ಮಾಡುತ್ತಿದ್ದ.


