ಕೆಲವೇ ದಿನಗಳ ಹಿಂದೆ 400 ಕೋಟಿ ರೂಪಾಯಿಗಳ ನೋಟುಗಳಿದ್ದ ಕಂಟೈನರ್ ಬಂದಿದ್ದು ಎಲ್ಲಿಂದ? ಇದರ ವಾರಸುದಾರರು ಯಾರು ? ಇದರಲ್ಲಿದ್ದ ಹಣ ಯಾರಿಗೆ ಸೇರಿದ್ದು ? ಕಂಟೈನರ್‌ನಲ್ಲಿ ಹಣವನ್ನು ರವಾನಿಸಲು ಅನುಮತಿ ಕೊಟ್ಟವರು ಯಾರು ? ಅಸಲಿಗೆ ಇದೊಂದು ಕ್ರಿಮಿನಲ್ ಕೃತ್ಯವಾಗಿದ್ದು ಕೋಟ್ಯಂತರ ರೂಪಾಯಿಗಳನ್ನು ಕದ್ದು ಮುಚ್ಚಿ ಕಂಟೈನರ್‌ನಲ್ಲಿಟ್ಟು ಸಾಗಿಸುವುದೇ ಮಹಾಪರಾಧ ! ಇಷ್ಟೆಲ್ಲ ಪ್ರಶ್ನೆಗಳು ಪೊಲೀಸರ ಮುಂದಿದ್ದರೂ ಇದಕ್ಕೆ ಉತ್ತರವನ್ನು ಹುಡುಕಲು ಆಸಕ್ತಿ ತೋರದ ಪೊಲೀಸರು ಈ ಪ್ರಕರಣದಲ್ಲಿ ಅನುಮಾನಗಳ ಹುತ್ತ ನಿರ್ಮಿಸಿದ್ದಾರೆ.
ಗೋವಾ ರಾಜ್ಯದ ಸರಿಹದ್ದುವಿನ ಚೋರ್ಲಾ ಘಾಟ್ ಬಳಿ, ಒಂದು ತಿಂಗಳ ಹಿಂದೆ ಕೋಟ್ಯಂತರ ರೂಪಾಯಿಗಳ ನೋಟಿನ ಕಂತೆಯ ಕಂಟೈನರ್ ಪತ್ತೆಯಾದರೂ ಇದರ ಸತ್ಯಾಸತ್ಯತೆ ಮುಚ್ಚಿಹೋಗಿರುವುದು ಸಾರ್ವತ್ರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿ ಪೊಲೀಸರಿಗೆ ಅಪಾರ ಹಣದ ನೋಟುಗಳಿದ್ದ ಕಂಟೈನರ್ ಪತ್ತೆಯಾಗಿ ಇದರ ದಾಖಲೆಗಳು ಮತ್ತು ಪುರಾವೆಗಳಿದ್ದರೂ ಈ ವಿಷಯದಲ್ಲಿ ಏನೂ ನಡೆದಿಲ್ಲ ಎನ್ನುವ ರೀತಿಯಲ್ಲಿಪೊಲೀಸರು ಜಾಣ ನಡೆ ಅನುಸರಿಸಿರುವುದು ಪ್ರಶ್ನಾರ್ಹ. ಇದೊಂದು ಕಟ್ಟು ಕತೆ. ಪಿರ್ಯಾದುದಾರನೇ ಈ ವಿಚಾರದಲ್ಲಿ ಸರಿಯಿಲ್ಲ ಎಂದು ದೂರುದಾರನ ಮೇಲೆಯೇ ಅಪವಾದ ಹೊರಿಸಲು ಪೊಲೀಸರು ಮುಂದಾಗಿರುವುದು ಮತ್ತಷ್ಟು ಹಲವು ಹತ್ತು ಅನುಮಾನಳಿಗೆ ಎಡೆಮಾಡಿಕೊಟ್ಟಿರುವುದು ಗಮನಾರ್ಹ.
ಪಿರ್ಯಾದುದಾರನು ತನ್ನ ಬಳಿ ಸಾಕಷ್ಟು ಪುರಾವೆಗಳಿವೆ,ಇದರ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರನ್ನು ಬಂಧಿಸಿ ಸತ್ಯವನ್ನು ಬಯಲಿಗೆಳೆಯಿರಿ ಎಂದು ದುಂಬಾಲು ಬಿದ್ದರೂ, ಪೊಲೀಸರು ಅಪರಾಧಿಗಳನ್ನು ಸಂರಕ್ಷಿಸುವ ಹಾದಿಯಲ್ಲಿ ಇಡೀ ಪ್ರಕರಣಕ್ಕೆ ಮುಕ್ತಾಯ ಹೇಳಲು ಮುಂದಾಗಿರುವುದು ಅಚ್ಚರಿಮೂಡಿಸಿದೆ. ಹಾಗಾದರೆ ತಿಂಗಳ ಹಿಂದೆ ೪೦೦ ಕೋಟಿ ರೂಪಾಯಿಗಳ ನೋಟುಗಳಿದ್ದ ಕಂಟೈನರ್ ಬಂದಿದ್ದು ಎಲ್ಲಿಂದ? ಇದರ ವಾರಸುದಾರರು ಯಾರು ? ಇದರಲ್ಲಿದ್ದ ಹಣ ಯಾರಿಗೆ ಸೇರಿದ್ದು ? ಕಂಟೈನರ್‌ನಲ್ಲಿ ಹಣವನ್ನು ರವಾನಿಸಲು ಅನುಮತಿ ಕೊಟ್ಟವರು ಯಾರು ? ಅಸಲಿಗೆ ಇದೊಂದು ಕ್ರಿಮಿನಲ್ ಕೃತ್ಯವಾಗಿದ್ದು ಕೋಟ್ಯಂತರರೂಪಾಯಿಗಳನ್ನು ಕದ್ದು ಮುಚ್ಚಿ ಕಂಟೈನರ್‌ನಲ್ಲಿಟ್ಟು ಸಾಗಿಸುವುದೇ ಮಹಾಪರಾಧ! ಇಷ್ಟೆಲ್ಲ ಪ್ರಶ್ನೆಗಳು ಪೊಲೀಸರ ಮುಂದಿದ್ದರೂ ಇದಕ್ಕೆ ಉತ್ತರವನ್ನು ಹುಡುಕಲು ಅಸಕ್ತಿ ತೋರದ ಪೊಲೀಸರು ಈ ಪ್ರಕರಣದಲ್ಲಿ ಅನುಮಾನಗಳ ಹುತ್ತವನ್ನು ನಿರ್ಮಿಸಿದ್ದಾರೆ. ಅಲ್ಲದೆ ಇಂತಹ ಘಟನೆಯೇ ನಡೆದಿಲ್ಲ ಎಂದು ಹೊಸ ವರಸೆ ಆರಂಭಿಸಿರುವುದು ಪರಮ ಸೋಜಿಗವಾಗಿದೆ.
ಕಂಟೈನರ್‌ನಲ್ಲಿ ಅಪಾರ ಹಣ ದೊರೆತಿದ್ದು ಮತ್ತು ಇದಕ್ಕೆ ಸಂಬಂಧಪಟ್ಟ ಹಲವು ಹತ್ತು ಸಂಗತಿಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಪೊಲೀಸರು ನೀಡಿದ ಮಾಹಿತಿಯ ಪ್ರಕಾರವೇ ಮಾಧ್ಯಮಗಳು ಇದನ್ನು ವರದಿ ಮಾಡಿದ್ದು. ಮಾಧ್ಯಮ ಗಳಾದರೋ ಇಂತಹ ಗುಮಾನಿ ಮತ್ತು ಸಂಶಯಗಳನ್ನು ಎತ್ತಿ ತೋರಿಸಿ ಅದರ ಮೇಲೆ ಬೆಳಕು ಚೆಲ್ಲುತ್ತೆ. ಕತ್ತಲೆಯಲ್ಲಿರುವ ಸಂಗತಿಗಳನ್ನು ಲೋಕಕ್ಕೆ ತೋರಿಸುತ್ತೆ. ಆದರೆ ಇದರ ಸತ್ಯಾಸತ್ಯತೆಯನ್ನು ಸಮಗ್ರ ತನಿಖೆಗೆ ಒಳಪಡಿಸಿ ಸಾಕ್ಷ್ಯಗಳ ಸಹಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರೆ ಆಗ ಪೊಲೀಸರ ತನಿಖೆಯ ಮೇಲೆ ಜನತೆಗೆ ನಂಬಿಕೆ ಮತ್ತು ವಿಶ್ವಾಸ ಉಂಟಾಗುತ್ತೆ. ಆದರೆ ಇದಾವುದೂ ಇಲ್ಲದೆ ಪಿರ್ಯಾದುದಾರನೇ ಸರಿಯಿಲ್ಲ. ಇವೆಲ್ಲವೂ ಸುಳ್ಳು ಎಂದು ಪೊಲೀಸರು ಆರಂಭಿಕ ಹಂತದಲ್ಲಿಯೇ ಪ್ರಕರಣವನ್ನು ಕ್ಲೋಸ್ ಮಾಡಲು ಹೊರಟಿರುವುದು ಕಂಡಾಗ ಅಂತಾರಾಜ್ಯ ನಿರ್ಜನ ಗಡಿ ಭಾಗದಲ್ಲಿ ಕಂಟೈನರ್‌ನಲ್ಲಿ ದೊರೆತ ಹಣ ಮತ್ತು ಅಕ್ರಮ ಸಾಗಣೆಯಲ್ಲಿ ಭಾಗಿಯಾದವರನ್ನು ವ್ಯವಸ್ಥಿತ ರೀತಿಯಲ್ಲಿ ಕಾನೂನಿನ ಕುಣಿಕೆಯಿಂದ ಬಚಾವ್ ಮಾಡಲು ಮತ್ತು ಕ್ರಿಮಿನಲ್ ಪ್ರಕರಣವನ್ನು ಮುಚ್ಚಿ ಹಾಕಲು ಉನ್ನತ ಮಟ್ಟದಲ್ಲಿ ಸಂಚು ನಡೆದಿದೆಯೇ ಎಂಬ ಬಲವಾದ ಅನುಮಾನವೀಗ ಸಾರ್ವಜನಿಕ ವಲಯದಲ್ಲಿ ತಲೆದೋರಿದೆ


