Saturday, February 14, 2026
Menu

ಯತ್ನಾಳ್‌ ವಿರುದ್ಧ ಚುನಾವಣಾ ಅಕ್ರಮ ಆರೋಪ: ಸುಪ್ರೀಂ ಕೋರ್ಟ್‌ನಲ್ಲೂ ವಜಾ

supreme court

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್‌ಗೆ ಸುಪ್ರೀಂಕೋರ್ಟ್‌ನಲ್ಲೂ ನಿರಾಸೆಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯತ್ನಾಳ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಹಮೀದ್ ಮುಶ್ರೀಫ್ ಎಲೆಕ್ಷನ್ ಪಿಟಿಷನ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕಲಬುರ್ಗಿ ಹೈಕೋರ್ಟ್ ಪೀಠವು, ಕಳೆದ 2025ರ ಜುಲೈ 18 ರಂದು ಅರ್ಜಿ ವಜಾಗೊಳಿಸಿ ಹಮೀದ್ ಅವರಿಗೆ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹಮೀದ್ ಮುಶ್ರೀಫ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದು, ರಿವ್ಯೂ ಪಿಟಿಷನ್ ವಜಾಗೊಳಿಸಿದೆ.

ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟ್ವಿಟರ್ನಲ್ಲಿ’ಸತ್ಯಮೇವ ಜಯತೆ’ ಎಂದು ಪೋಸ್ಟ್ ಮಾಡಿದ್ದಾರೆ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ವಿಜಯಪುರದ ಜನತೆ ಸದಾ ನನ್ನೊಂದಿಗಿದ್ದಾರೆ ಎಂಬ ಅಚಲ ವಿಶ್ವಾಸ ನನಗಿದೆ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯನ್ನು ‘ರಾಜಕೀಯ ನಿರುದ್ಯೋಗಿ’ ಎಂದ ಯತ್ನಾಳ್, ಅನಗತ್ಯವಾಗಿ ನ್ಯಾಯಾಲಯದ ಸಮಯ ವ್ಯರ್ಥ ಮಾಡುವವರಿಗೆ ಕೋರ್ಟ್ ದಂಡ ವಿಧಿಸುವ ಮೂಲಕ ಸರಿಯಾದ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಎಂದಿಗೂ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.

ತಮ್ಮ ಮೇಲೆ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತ ಆರೋಪ ಮಾಡಿದವರ ವಿರುದ್ಧ ಈಗ ಕಾನೂನು ಸಮರ ಸಾರಲು ಸಜ್ಜಾಗಿದ್ದಾರೆ. ಸುಳ್ಳು ಆರೋಪ ಹೊರಿಸಿದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *