Menu

ಆಂಧ್ರ ಸಿಎಂ ಜೊತೆ ಮಾತಾಡಿ ಸಮುದ್ರ ಸೇರುವ ತುಂಗಭದ್ರಾ ನೀರನ್ನು ರೈತರಿಗೆ ಒದಗಿಸುವ ಪ್ರಯತ್ನ: ಡಿಸಿಎಂ 

ತುಂಗಭದ್ರಾ ಅಣೆಕಟ್ಟಿನ 30 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿರುವುದನ್ನು ತಪ್ಪಿಸಲು ಈ ಭಾಗದ ನಾಯಕರು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಾನು ಇದಕ್ಕೆ ಬದ್ಧನಾಗಿದ್ದೇನೆ. ಆದರೆ ಆಂಧ್ರ ಸಿಎಂ ಈ ವಿಚಾರವಾಗಿ ಚರ್ಚೆ ಮಾಡಲು ನನಗೆ ಸಮಯಾವಕಾಶ ನೀಡುತ್ತಿಲ್ಲ. ಅವರು ನಮಗೆ ಅವಕಾಶ ಕೊಟ್ಟರೆ ಪೋಲಾಗುತ್ತಿರುವ 30 ಟಿಎಂಸಿ ತುಂಗಭದ್ರಾ ನೀರನ್ನು ನಿಲ್ಲಿಸಿ, ಈ ಭಾಗದ ರೈತರು, ಜನರಿಗೆ ನ್ಯಾಯ ಒದಗಿಸಲಾಗುವುದು ಎಂದು ಡಿಕೆ ಶಿವಕುಮಾರ್  ಭರವಸೆ ನೀಡಿದರು.

ರಾಯಚೂರು ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿಮ್ಮ ಜಿಲ್ಲೆಯ ಶಾಸಕರು ನನ್ನ ಮೇಲೆ ಒತ್ತಡ ತಂದು, ಕಾಲುವೆಗಳ ಕೊನೆ ಭಾಗದವರೆಗೂ ನೀರು ಹರಿಯುವಂತೆ ಮಾಡಲು ಕಾನೂನು ತರುವಂತೆ ಮಾಡಿದರು. ಕಾಲುವೆಗಳ ಮೇಲ್ಬಾಗದಲ್ಲಿ ನೀರೆತ್ತುವ ಮೂಲಕ ಕೊನೆ ಭಾಗದವರೆಗೆ ನೀರು ತಲುಪುತ್ತಿರಲಿಲ್ಲ. ಹೀಗಾಗಿ ನಾವು ಹೊಸ ಕಾನೂನು ತಂದಿದ್ದೇವೆ. ಕಳೆದ ಬಾರಿ ನೀರಾವರಿ ಸಚಿವನಾಗಿದ್ದಾಗ ಇಲ್ಲಿಗೆ ಬಂದಿದ್ದೆ. ಬಂಗಾರಪ್ಪನವರ ಕೆರೆಗೆ 300 ಕೋಟಿ ನೀಡಿದ್ದು ಆ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಟಿಬಿ ಅಣೆಕಟ್ಟಿನ ಎಲ್ಲಾ ಗೇಟ್ ಬದಲಾಯಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ನಾವು ಇನ್ನು ಮಾಡಿಯೇ ತೀರುತ್ತೇವೆ ಎಂದು ತಿಳಿಸಿದರು.

“ಈ ಹಿಂದೆ ಕಾಂಗ್ರೆಸ್ ಸರ್ಕಾರದ ಮಧ್ಯಾಹ್ನ ಬಿಸಿಯೂಟ, ಮನರೇಗಾ, ಸ್ತ್ರೀಶಕ್ತಿ ಕಾರ್ಯಕ್ರಮಗಳನ್ನು ಈ ಭಾಗದಿಂದಲೇ ನಾವು ಆರಂಭಿಸಿದೆವು. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೋರಾಟ ಮಾಡಿ ನಿಮ್ಮೆಲ್ಲರ ಅಭಿವೃದ್ಧಿಗೆ 371ಜೆ ಜಾರಿಗೆತಂದು ನಿಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ಹೀಗಾಗಿ ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ಸ್ಮರಿಸುವಂತೆ ಈ ಭಾಗದ ಜನ ಖರ್ಗೆ ಅವರನ್ನು ಸ್ಮರಿಸಬೇಕು. ಆ ಮೂಲಕ ಖರ್ಗೆ ಅವರ ಹೆಸರನ್ನು ಚಿರಸ್ಥಾಯಿ ಯಾಗಿ ಉಳಿಸಬೇಕು ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ” ಎಂದು ಮನವಿ ಮಾಡಿದರು.

“ಶರಣರು, ದಾಸರು, ಸಂತರ ಪರಂಪರೆಯ ನೆಲೆಬೀಡು. ರೈತರನ್ನು ಕಾಪಾಡುವ ಕೃಷ್ಣ, ತುಂಗಭದ್ರೆಯ ಬೀಡು. ಎಡೆದೊರೆ ಖ್ಯಾತಿಯ ರಾಯಚೂರು ಜಿಲ್ಲೆ ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಪವಿತ್ರ ನಾಡು. ನಮ್ಮೆಲ್ಲರಿಗೂ ಉತ್ತಮವಾದ ಸೋನಾ ಮಸೂರಿ ಅಕ್ಕಿ, ಹತ್ತಿ, ಚಿನ್ನ ನೀಡುತ್ತಿರುವ ಪವಿತ್ರವಾದ ನೆಲಕ್ಕೆ ಬಂದು, ರಾಯಚೂರು ಉತ್ಸವದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ” ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದಕ್ಕೆ ಎಲ್ಲರಿಗೂ ಸಂತೋಷ ಬಂದಿದೆ. ಎಲ್ಲರಿಗೂ 200 ಯೂನಿಟ್ ವರೆಗೂ ವಿದ್ಯುತ್ ಉಚಿತ, 10 ಕೆ.ಜಿ ಅಕ್ಕಿ, ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಈ ಐದು ಗ್ಯಾರಂಟಿ ಯೋಜನೆಗಳ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲಾಗುತ್ತಿದೆ. ಇದು ರೈತರ ನಾಡು. ಹಸಿದಾಗ ಅನ್ನ ಕೊಟ್ಟು, ಬದುಕಿದಾಗ ಶಿಕ್ಷಣ ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನೀವು ಹೊಸ ರೂಪ ನೀಡುತ್ತಿದ್ದೀರಿ” ಎಂದು ಹೇಳಿದರು.

ನಮ್ಮ ಸರ್ಕಾರ ನಿಮ್ಮ ಜತೆಯಲ್ಲಿದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಬದ್ಧರಾಗಿದ್ದೇವೆ. ಈ ಜಿಲ್ಲೆಯ ಆಸ್ಪತ್ರೆ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ಮಾಡಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ. ಈ ಭಾಗದಲ್ಲಿ ಏಮ್ಸ್ ತರಬೇಕು ಎಂದು ಪಣ ತೊಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

“ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಸರ್ಕಾರ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ.14ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದೆಯೂ ನೀವು ಈ ಕೈ ಅನ್ನು ಅಧಿಕಾರಕ್ಕೆ ತಂದು ಶಕ್ತಿ ಕೊಡಬೇಕು” ಎಂದು ಮನವಿ ಮಾಡಿದರು.

Related Posts

Leave a Reply

Your email address will not be published. Required fields are marked *