ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯಲ್ಲಿ ರಾಜ್ಯದ ನೈಜ ಮತದಾರರಿಗೆ ಅನ್ಯಾಯವಾಗಿದೆ ಎಂದು ಸಲ್ಲಿಸಿದ್ದ ಅರ್ಜಿಯ ಪರವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂಕೋರ್ಟ್‌ನಲ್ಲಿ ತಾವೇ ವಾದ ಮಂಡಿಸಿದ್ದಾರೆ. ಹೀಗೆ ಸುಪ್ರೀಂಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರನ್ನು ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಪ್ರತಿನಿಧಿಸಿದ್ದು, ಜೊತೆಗೆ ಮಮತಾ ಕೂಡ ಸಂಕ್ಷಿಪ್ತ ವಾದ ಮಂಡಿಸಿದರು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ಮಮತಾ ವಾದವನ್ನು ಆಲಿಸಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ. ಮುಂದಿನ ಸೋಮವಾರದ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೊಯ್ಮಾಲ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಸದಸ್ಯ ರಾಗಿದ್ದಾರೆ.
ನ್ಯಾಯದಾನ ವಿಳಂಬವಾಗುತ್ತಿದೆ. ನ್ಯಾಯವು ಮುಚ್ಚಿದ ಕದಗಳ ಹಿಂದೆ ಕಣ್ಣೀರಿಡುತ್ತಿದೆ. ನಮಗೆ ನ್ಯಾಯ ಸಿಗುವುದಿಲ್ಲವೆಂದು ಖಾತ್ರಿಯಾದಾಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದೇವೆ. ನಾನು ನನ್ನ ಜನರಿಗಾಗಿ ಹೋರಾಡುತ್ತಿದ್ದೇನೆಯೇ ಹೊರತು ನನ್ನ ಪಕ್ಷಕ್ಕಾಗಿ ಅಲ್ಲ ಎಂದು ಬ್ಯಾನರ್ಜಿ ನ್ಯಾಯಾಲಯಕ್ಕೆ ತಿಳಿಸಿದರು.
ಪಶ್ಚಿಮ ಬಂಗಾಳಕ್ಕೆ ಅನ್ಯಾಯ ಮಾಡುತ್ತಿದ್ದಾರೆ, ಎರಡು ವರ್ಷ ಮಾಡಬೇಕಿರುವ ಪ್ರಕ್ರಿಯೆಯನ್ನು ಎರಡೇ ತಿಂಗಳಲ್ಲಿ ಮಾಡಲು ಬಯಸಿದ್ದರು. ಹಬ್ಬಹರಿದಿನಗಳು, ಸುಗ್ಗಿ ಕಾಲದಲ್ಲಿ ಜನಸಾಮಾನ್ಯರಿಗೆ ಕಿರುಕುಳ ಕೊಡುತ್ತಿದ್ದಾರೆ. ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 24 ವರ್ಷ ಮಾಡದೆ ಹೋದ ಕೆಲಸವನ್ನು ಮೂರು ತಿಂಗಳಲ್ಲಿ ಮಾಡಲು ಹೊರಟು ಚುನಾವಣಾ ಆಯೋಗ ನೀಡಿರುವ ಕಿರುಕುಳಕ್ಕೆ ಬಿ.ಎಲ್.ಒಗಳ ಜೀವ ಹೋಗಿದೆ. ಅಸ್ಸಾಂ ಅಥವಾ ಇತರ ಈಶಾನ್ಯ ರಾಜ್ಯಗಳನ್ನು ಯಾಕೆ ಎಸ್.ಐ.ಆರ್.ಗೆ ಗುರಿ ಮಾಡಿಲ್ಲ, ಪಶ್ಚಿಮ ಬಂಗಾಳದ ಮೇಲೆ ಯಾಕೆ ಈ ದ್ವೇಷ ಸಾಧನೆ ಎಂದು ಮಮತಾ ಪ್ರಶ್ನಿಸಿದರು. ಚುನಾವಣಾ ಆಯೋಗ ವಾಟ್ಸ್ಯಾಪ್ ನಲ್ಲಿ ನಿರ್ದೇಶನಗಳನ್ನು ನೀಡುವ ವಾಟ್ಸ್ಯಾಪ್ ಆಯೋಗ ಆಗಿ ಹೋಗಿದೆ ಎಂದರು.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದನ್ನು ನಿಲ್ಲಿಸಲು ತುರ್ತು ನಿರ್ದೇಶನಗಳನ್ನು ನೀಡುವ ಅಗತ್ಯವಿದೆ. ಮುಂಬರುವ ಬಂಗಾಳ ವಿಧಾನಸಭಾ ಚುನಾವಣೆನ್ನು 2025ರ ಮತದಾರರ ಪಟ್ಟಿಯ ಆಧಾರದಲ್ಲಿ ನಡೆಸಬೇಕು. ಹೊಸ ಮತದಾರರ ಪಟ್ಟಿಯನ್ನು ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಪ್ರಕಟಿಸಬಹುದು. ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಗೆ ಹತ್ತು ದಿನಗಳು ಉಳಿದಿವೆ. 1.36 ಕೋಟಿ ಮತದಾರರನ್ನು ದೋಷಪೂರಿತ ಹೆಸರುಗಳ ಪಟ್ಟಿಗೆ ಸೇರಿಸಲಾಗಿದೆ. ಮತ ದಾರರ ವಿವರಣೆಯನ್ನು ಚುನಾವಣಾ ಆಯೋಗ ಈವರೆಗೆ ಆಲಿಸಿಲ್ಲ. ಈ ಪ್ರಕ್ರಿಯೆಯು ಅಂತಿಮ ಮತದಾರರ ಪಟ್ಟಿ ಪ್ರಕಟಣೆಯ ದಿನಾಂಕದ ಒಳಗಾಗಿ ಮುಗಿಯುವುದು ಅಸಾಧ್ಯ ಎಂದು ಬ್ಯಾನರ್ಜಿ ಪರ ವಕೀಲರಾದ ಶ್ಯಾಮ್ ದಿವಾನ್ ಅವರು ನ್ಯಾಯ ಪೀಠವನ್ನು ಕೋರಿದರು.


