ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯವರಿಗೆ ಮನೆಗಳನ್ನು ನೀಡುವುದಿಲ್ಲ ಹಾಗೂ ಅವರನ್ನು ರಾಜ್ಯದಿಂದ ಹೊರಗೆ ಕಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಸಿಎಂ ಈ ವಿಚಾರ ಸ್ಪಷ್ಟಪಡಿಸಿದ್ದಾರೆ.
ಪದ್ಮಶ್ರೀ ವಿಜೇತ ಮಾಜಿ ರಾಜ್ಯಸಭಾ ಸದಸ್ಯೆ ಜಯಶ್ರೀ ಯವರ ಭೂಮಿಯ ಸರ್ವೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಯು ಕರ್ತವ್ಯಚ್ಯುತಿ ಮಾಡಿದ್ದರೆ, ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಪ್ಪು ಎಸಗಿದ ಅಧಿಕಾರಿಯ ಮೇಲೆ ನಿಸ್ಸಂದೇಹವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಹಾದಿಯನ್ನು ತಪ್ಪಿಲ್ಲ ಹಾಗೂ ನಾನು ಅಸಹಾಯಕ ಮುಖ್ಯಮಂತ್ರಿಯೂ ಅಲ್ಲ. 2.5 ವರ್ಷದಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಅಂಕಿ ಅಂಶ , ದಾಖಲೆಗಳ ಸಮೇತ ಮಾಹಿತಿ ನೀಡಿದರು.
ಹಿಂದುಳಿದ ವರ್ಗದ ಬಗ್ಗೆ ಕಾಳಜಿಯಿರುವ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2013-14 ರಿಂದ 2018 ರವರೆಗೆ 543 ಹಾಸ್ಟೆಲ್ ಗಳನ್ನು ನಿರ್ಮಿಸಲಾಗಿದೆ . ನಂತರದ ಬಿಜೆಪಿ ಸರ್ಕಾರದ ಅವಧಿಯಲ್ಲಿ(2019 ರಿಂದ 2023) ಕೇವಲ 5 ಹಾಸ್ಟೆಲ್ ಗಳು ಆಗಿವೆ . ಕಾಂಗ್ರೆಸ್ ಸರ್ಕಾರ 2023-24 ರಿಂದ ಇಲ್ಲಿಯವರೆಗೆ 220 ಹಾಸ್ಟೆಲ್ ನಿರ್ಮಿಸಿದೆ. ನಮ್ಮ ಸರ್ಕಾರ 1452000 ಮನೆ ಗಳನ್ನು ನಿರ್ಮಿಸಿದೆ. ಬಿಜೆಪಿ ಅವಧಿಯಲ್ಲಿ ಕೇವಲ 5 ಲಕ್ಷ ಮನೆಗಳಾಗಿವೆ. ಈ ಎಲ್ಲ ಸತ್ಯಾಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು ಎಂದರು.
ನಾವು ಜನಪರವಾದ, ಸಮಾಜಮುಖಿಯಾದ ಆಡಳಿತವನ್ನು ನೀಡುತ್ತಿದ್ದು, ಕರ್ನಾಟಕದ ಅಭಿವೃದ್ಧಿ ಮಾದರಿ ಸರ್ಕಾರವಾಗಿದೆ. ಈ ಅಭಿವೃದ್ಧಿ ಮಾದರಿಯನ್ನು 21 ಕ್ಕಿಂತ ಹೆಚ್ಚು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ರಾಜ್ಯಪಾಲರು, ಸರ್ಕಾರದ ಭಾಷಣವನ್ನು ಓದಿದ್ದರೆ, ನಮ್ಮ ಜನಪರ ಆಡಳಿತದ ಬಗ್ಗೆ ಜನರಿಗೆ ಅರಿವು ನೀಡಿದಂತಾಗುತ್ತಿತ್ತು ಎಂದು ಮುಖ್ಯಮಂತ್ರಿ ತಿಳಿಸಿದರು.
ಕೇಂದ್ರ ವಿತ್ತ ಸಚಿವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವುದಾಗಿ ಘೋಷಿಸಿ , ನಂತರದ ರಾಜ್ಯ ಸರ್ಕಾರವೂ ಇದನ್ನು ರಾಷ್ಟ್ರೀಯ ಯೋಜನೆ ಘೋಷಿಸಲಾಗುವುದು ಎಂದೂ ತಿಳಿಸಿದ್ದರು. ಆದರೆ ಅನುದಾನವಾಗಲಿ, ರಾಷ್ಟ್ರೀಯ ಯೋಜನೆ ಎಂದಾಗಲಿ ಘೋಷಣೆಯಾಗಿಲ್ಲ. ಇದು ಸತ್ಯವಲ್ಲವೇ ಎಂದು ಪ್ರಶ್ನಿಸಿದರು.
15 ನೇ ಹಣಕಾಸು ಆಯೋಗದಲ್ಲಿ ಶಿಫಾರಸ್ಸು ಮಾಡಲಾಗಿದ್ದ 11495 ಕೋಟಿ ರೂ.ಗಳು ರಾಜ್ಯಕ್ಕೆ ನೀಡಲಿಲ್ಲ. 14 ನೇ ಆಯೋಗದಲ್ಲಿ 4.71 % ರಾಜ್ಯಕ್ಕೆ ಕೊಡಲಾಗಿತ್ತು. 15 ನೇ ಆಯೋಗದಲ್ಲಿ 3.64% ಕ್ಕೆ ಇಳಿಸಿದರು. ಇದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ 1,25,000 ಕೋಟಿ ಕಡಿಮೆಯಾಯಿತು. ಈ ಅನುದಾನದ ಕಡಿತದ ಬಗ್ಗೆ ಪ್ರಶ್ನಿಸುವುದು ರಾಜ್ಯದ ಎಲ್ಲ ಜನಪ್ರತಿನಿಧಿಗಳ ಜವಾ ಬ್ದಾರಿ. ರಾಜ್ಯದಿಂದ 4.50 ಲಕ್ಷ ಕೋಟಿ ತೆರಿಗೆ ಕೊಟ್ಟರೆ, ನಮಗೆ ಕೇವಲ 55 ರಿಂದ 60 ಸಾವಿರ ಕೋಟಿ ರಾಜ್ಯಕ್ಕೆ ಬರುತ್ತದೆ ಎಂದು ವಿವರಿಸಿದರು.
ಎಂಟು ವರ್ಷದಿಂದ ಹೆಚ್ಚು ಜಿಎಸ್ ಟಿ ತೆರಿಗೆ ಪಡೆದು, ಈಗ ಕೇಂದ್ರ ಸರ್ಕಾರ ಹಠಾತ್ತಾಗಿ ಜಿಎಸ್ ಟಿ ಯನ್ನು ಕಡಿತಗೊಳಿಸಿತು. ರಾಜ್ಯಕ್ಕೆ ಜಿಎಸ್ ಟಿ ಯಿಂದ 12-15 ಸಾವಿರ ಕೋಟಿ ನಷ್ಟವಾಗು ತ್ತದೆ. ಇದು ಏಳು ಕೋಟಿ ಕನ್ನಡಿಗರಿಗೆ ಆದ ನಷ್ಟ ಎಂದರು.
ಕೇಂದ್ರಸರ್ಕಾರ ಸೆಸ್ ಮತ್ತು ಸರ್ಜಾಜ್ ನ್ನು ಸುಮಾರು 6 ಲಕ್ಷ ಕೋಟಿ ವಸೂಲಿ ಯಾಗುತ್ತಿದ್ದು, ಇದರಲ್ಲಿ ರಾಜ್ಯಗಳಿಗೆ ಒಂದು ಪೈಸೆಯೂ ಬರುವುದಿಲ್ಲ. ಈ ಬಗ್ಗೆ ಧ್ವನಿಎತ್ತಿ ರಾಜ್ಯಗಳಿಗೂ ಪಾಲು ನೀಡಿ ಎಂದು ನಮ್ಮ ಸರ್ಕಾರ ಒತ್ತಾಯಿಸಿದ್ದರೂ, ಇದು ಜಾರಿಯಾಗಿಲ್ಲ. ಈ ಎಲ್ಲ ಅಂಶಗಳು ವಾಸ್ತವಾಂಶವಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಕಡಿತದ ಬಗ್ಗೆ ನಾನೆ ಹಲವು ಬಾರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ವಿತ್ತ ಸಚಿವರನ್ನು ಈ ಸಂಬಂಧ ಭೇಟಿ ಮಾಡಲಾಗಿದೆ. ಜಿಎಸ್ ಟಿ ಸಮಿತಿಸಭೆಯಲ್ಲಿ ರಾಜ್ಯಸರ್ಕಾರ ತನ್ನ ನಿಲುವನ್ನು ಮಂಡಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಾಡಲಾದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಪ್ರಸ್ತಾವನ್ನು ಅಂಗೀಕರಿಸಲಾಯಿತು.


