ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ಯುವಕನನ್ನು ಅಡ್ಡಗಟ್ಟಿ ಬೈಕ್ ಸಂಏತ ಹಣ ದರೋಡೆ ಮಾಡಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ ಲಾಂಗ್‌ನಿಂದ ಹಲ್ಲೆ ನಡೆಸಿ ಯುವಕನ ಬೈಕ್ ಜೊತೆ 31 ಲಕ್ಷದ 38 ಸಾವಿರ ರೂ. ದರೋಡೆ ಮಾಡಲಾಗಿದೆ. ದರೋಡೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೈಲಾಸ್ ಎಂಬ ಯುವಕನ ಬೈಕ್ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ. ರಾಕೇಶ್ ಎಂಬವವರ ಬಳಿ ಕ್ಯಾಷ್ ಪಿಕಪ್ ಕೆಲಸ ಮಾಡಿಕೊಂಡಿದ್ದ ಕೈಲಾಸ್ ಬೈಕ್‌ನಲ್ಲಿ ಹೋಗಿ ಉಡಾನ್ ಕಂಪನಿಯ ಬ್ರ್ಯಾಂಚ್‌ಗಳಲ್ಲಿ ಹಣ ಪಡೆದುಕೊಂಡು ಬೈಕ್ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದರು. ಬೈಕ್‌ನಲ್ಲಿ ಸಕಲವಾರ ಕಡೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಬರುವಾಗ ಎರಡು ಬೈಕ್‌ನಲ್ಲಿ ಬಂದಿದ್ದ ನಾಲ್ವರು ಅಡ್ಡ ಗಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಳಿಪಟ ಮಾಂಜಾದಿಂದ ಯುವಕನ ಕಾಲಿನ ನರಗಳು ಕಟ್
ಬೆಂಗಳೂರಿನ ಆರ್.ಟಿ. ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗಾರ್ಜುನ ಎಂಬ ಯುವಕನ ಕಾಲಿಗೆ ಗಾಳಿಪಟದ ದಾರ ತಗುಲಿ ಕಾಲಿನ ನರಗಳೇ ಕಟ್ ಆಗಿವೆ.
ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗಾಳಿಪಟದ ದಾರ ಮೊದಲು ಬೈಕ್ ಸವಾರನಿಗೆ ತಗುಲಿದೆ. ಸವಾರ ಹೇಗೋ ತಪ್ಪಿಸಿಕೊಂಡು ಮುಂದೆ ಹೋಗಿದ್ದು, ಆ ದಾರ ನಾಗಾರ್ಜುನ ಕಾಲಿಗೆ ಸುತ್ತಿಕೊಂಡಿದೆ. ಹಿಂದಿನಿಂದ ಬಂದ ಕಾರೊಂದು ದಾರವನ್ನು ಎಳೆದುಕೊಂಡು ಹೋಗಿದೆ. ಕಾರು ವೇಗವಾಗಿ ಚಲಿಸಿದಾಗ ನಾಗಾರ್ಜುನನ ಕಾಲಿಗೆ ಸುತ್ತಿಕೊಂಡಿದ್ದ ದಾರ ಬಿಗಿಯಾಗಿದೆ. ದಾರವು ಹರಿತವಾಗಿ ದ್ದರಿಂದ ನಾಗಾರ್ಜುನನ ಕಾಲಿನ ಮೂರು ನರಗಳು ಕಟ್ ಆಗಿವೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಸಾಮಾನ್ಯವಾಗಿ ಗಾಳಿಪಟ ಹಾರಿಸಲು ಬಳಸುವ ದಾರಗಳಿಗೆ ಗಾಜಿನ ಪುಡಿ ಮತ್ತು ಅಂಟು ಸವರಿ ಹರಿತಗೊಳಿಸಲಾಗುತ್ತದೆ. ನೈಲಾನ್‌ನಿಂದ ತಯಾರಿಸಿದ ಚೈನೀಸ್ ಮಾಂಜಾ ದಾರಗಳು ತಗುಲಿದರೆ ಚರ್ಮ ಮತ್ತು ಮಾಂಸಖಂಡಗಳನ್ನು ಕತ್ತರಿಸುತ್ತವೆ. ಕುತ್ತಿಗೆಗೆ ತಗುಲಿದರೆ ಸ್ಥಳದಲ್ಲೇ ಸಾವು ಸಾಧ್ಯತೆ ಇರುತ್ತದೆ.


