ಬ್ಯಾರಿಗಳನ್ನು ಯಾರೇ ವಿಭಜಿಸಲು ಪ್ರಯತ್ನಿಸಿದರೂ ತಮ್ಮ ಅಸ್ಮಿತೆಯನ್ನು, ಒಗ್ಗಟ್ಟನ್ನು ಉಳಿಸಿಕೊಂಡು ಹೋಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದಬೃಹತ್ ಬ್ಯಾರಿ ಕೂಟ -2026 ಉದ್ಘಾಟಿಸಿ ಮಾತನಾಡಿದರು. ತುಳು ಮತ್ತು ಬ್ಯಾರಿ ಭಾಷೆಗೆ ಲಿಪಿ ಇಲ್ಲದ್ದರಿಂದ ಕನ್ನಡದಲ್ಲಿಯೇ ನಿಮ್ಮತನವನ್ನು ಉಳಿಸಿಕೊಂಡಿರುವುದು ಮುಖ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿಗಳು ದೇಶ, ವಿದೇಶ ಅನೇಕ ಭಾಗಗಳಲ್ಲಿ ಕೆಲಸ ಮಾಡುವವರಾದರೂ ಬ್ಯಾರಿ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಬ್ಯಾರಿಗಳು ಜಾತ್ಯತೀತರು. ಜಾತಿ ವ್ಯಾಮೋಹ ವಾಗಲಿ, ಧರ್ಮದ ವ್ಯಾಮೋಹವಾಗಲಿ ಇಲ್ಲ. ಮೂಲತಃ ವ್ಯಾಪಾರಿಗಳಾದ ಬ್ಯಾರಿಗಳು ಎಲ್ಲಾ ಸಮುದಾಯಗಳೊಂದಿಗೆ ಹೊಂದಿಕೊಂಡು ಅವರ ಸಂಸ್ಕೃತಿ, ಉದ್ಯೋಗದೊಂದಿಗೆ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಿರುವುದು ದೊಡ್ಡ ವಿಚಾರ ಎಂದು ಹೇಳಿದರು .
ಬ್ಯಾರಿ ಸಮುದಾಯದವರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ. ಒಂದು ಕಾಲದಲ್ಲಿ ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಹೆಣ್ಣು ಮಕ್ಕಳು ವಿದ್ಯಾವಂತರಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದು ಒಳ್ಳೆಯ ಬೆಳವಣಿಗೆ. ಲಿಂಗ ತಾರತಮ್ಯ ಹೋಗಲಾಡಿಸಲು ವಿದ್ಯಾಭ್ಯಾಸ ಅವಶ್ಯಕ ಎಂದರು.
ಎಲ್ಲರೂ ಜಾತ್ಯತೀತರಾಗಿರುವುದು ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪರಸ್ಪರ ಪ್ರೀತಿಸಬೇಕು , ಮನುಷ್ಯರಾಗಿ ಬಾಳಬೇಕು ಎಂದು ಎಲ್ಲಾ ಧರ್ಮಗಳೂ ಹೇಳುತ್ತವೆ. ಧರ್ಮವನ್ನು ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಹೇಳಿದರು.
ಬ್ಯಾರಿ ಭವನ ನಿರ್ಮಾಣಕ್ಕೆ 5 ಕೋಟಿ ರೂ. ನೀಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿ ಬ್ಯಾರಿ ಭಾಷೆ, ಕಲೆ ಉಳಿಸಲು ಸರ್ಕಾರ ನೆರವು ನೀಡಲಿದೆ. ಮಂಗಳೂರು ಬ್ಯಾರಿ ಅಕಾಡೆಮಿಗೆ 3 ಕೋಟಿ, ಹಜ್ ಭವನಕ್ಕೆ 10 ಕೋಟಿ ಅನುದಾನ ನೀಡಲಾಗಿದೆ ಎಂದರು.
ಬ್ಯಾರಿ ಸಮುದಾಯಕ್ಕೆ ಸೇರಿದ ಯು. ಟಿ.ಖಾದರ್ ವಿಧಾನಸಭಾಧ್ಯಕ್ಷರಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


