ಯಾದಗಿರಿಯಲ್ಲಿ ಶಿಕ್ಷಕರು ಬೈದರೆಂದು ಮನ ನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲೆಯ ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪವನ್ (15) ಆತ್ಮಹತ್ಯೆ ಮಾಡಿಕೊಂಡ ಒಂಬತ್ತನೇ ತರಗತಿಯ ವಿದ್ಯಾರ್ಥಿ.
ಶಾಲೆ ಆವರಣದ ಹಿಂಭಾಗದಲ್ಲಿರುವ ಗಿಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿ ತಂದೆ ಮಲ್ಲಪ್ಪ ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಮುಖ್ಯ ಶಿಕ್ಷಕ ಅಯ್ಯಪ್ಪ ಸೇರಿ ಆರು ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶಿಕ್ಷಕರು ಬೈದಿದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಹೆಚ್ಚಿನ ಮಾಹಿತಿ ಲಭಿಸಲಿದೆ.
ಔಷಧ ವಿತರಕ ಆತ್ಮಹತ್ಯೆ
ಕಾರವಾರದ ಪಿಕ್ಳೆ ನರ್ಸಿಂಗ್ ಹೋಂನ ಔಷಧಿ ವಿತರಕ ರಾಜು ಪಿಕ್ಳೆ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಇರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹದಿನೈದು ದಿನದ ಹಿಂದೆ ಅವಧಿ ಮೀರಿದ ಮಾತ್ರೆ ನೀಡಿದ ಆರೋಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಘಟನೆಯಿಂದ ರಾಜು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಪರಿಚಿತ ರೋಗಿಯ ಸಂಬಂಧಿ ರಹಸ್ಯವಾಗಿ ವೀಡಿಯೊ ಮಾಡಿ ವೈರಲ್ ಆಗಿತ್ತು. ಇದು ಕಣ್ತಪ್ಪಿನಿಂದ ಆದ ಸಮಸ್ಯೆ ಎಂದು ರಾಜು ಕ್ಷಮೆ ಕೇಳಿದ್ದರು. ಅಂಕೋಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


