ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮ ಸಮೀಪದ ಗಂಗವ್ವನ ಸರ ಮೀಸಲು ಅರಣ್ಯ ಪ್ರದೇಶದಲ್ಲಿ ಹಾರೋಗೊಪ್ಪ ಗ್ರಾಮದ ಕೃಷಿಕ ಸೋಮ್ಲನಾಯ್ಕ(60) ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.
ರೈತ ಸೋಮ್ಲನಾಯ್ಕ ಜಮೀನಿನಲ್ಲಿ ಅಳವಡಿಸಿದ್ದ ಮೋಟರ್ ಆನ್ ಮಾಡಲು ಹೋಗಿದ್ದಾಗ ಕರಡಿ ದಾಳಿ ನಡೆಸಿದೆ. ಕರಡಿ ದಾಳಿಯಿಂದ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ತೀವ್ರ ಗಾಯಗೊಂಡ ಅವರು ತಪ್ಪಿಸಿಕೊಂಡು ಬಂದಿದ್ದಾರೆ. ನಂತರ ಹಾರೋಗೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ.
ಅವರ ಕಿರುಚಾಟಕ್ಕೆ ಕರಡಿ ಸ್ಥಳದಿಂದ ಪರಾರಿಯಾಗಿದ್ದು, ಪ್ರಾಣಾಪಾಯದಿಂದ ತಪ್ಪಿಸಿಕೊಂಡ ಅವರು ಗಾಯಗೊಂಡ ಸ್ಥಿತಿಯಲ್ಲೇ ಹಾರೆಗೊಪ್ಪ ಬಸ್ ನಿಲ್ದಾಣದವರೆಗೆ ಓಡಿ ಬಂದಿದ್ದಾರೆ. ಸಾರ್ವಜನಿಕರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕರಡಿ ದಾಳಿ ನಡೆಸಿದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆಯಿಂದ ನೀಡಲಾಗುವ ಪರಿಹಾರವನ್ನು ಒದಗಿಸುವುದಾಗಿ ಭರವಸೆ ನೀಡಿ, ಆ ಪ್ರದೇಶದಲ್ಲಿ ಮತ್ತೆ ಕರಡಿ ಕಾಣಿಸಿಕೊಂಡಲ್ಲಿ ಸೆರೆಹಿಡಿಯಲು ಬೋನ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಚಿಕಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರಗಳಲ್ಲಿ ಇತ್ತೀಚೆಗೆ ವನ್ಯ ಜೀವಿಗಳ ಹಾವಳಿ ಹೆಚ್ಚಿದ್ದು, ಸ್ಥಳೀಯರ ಪ್ರಾಣಹಾನಿಗೂ ಕಾರಣವಾಗುತ್ತಿದೆ. ವನ್ಯ ಜೀವಿಗಳ ಆವಾಸ ಸ್ಥಾನಗಳು ರೆಸಾರ್ಟ್, ಲಾಡ್ಜ್, ತೋಟಗಳಾಗಿ ಪರಿವರ್ತನೆ ಗೊಂಡಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆಯಿಡುತ್ತಿವೆ. ಆನೆ, ಹುಲಿ, ಚಿರತೆ, ಕರಡಿ ದಾಳಿಗೆ ಬಲಿಯಾಗುವ ಘಟನೆಗಳು ಆಗಾಗ ವರದಿಯಾಗುತ್ತಿವೆ.


