ಬಳ್ಳಾರಿಯಿಂದ ಗುಜರಾತ್‌ಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 523 ಚೀಲ ಪಡಿತರ ಅಕ್ಕಿಯನ್ನು ಸಹಾಯಕ ಆಯುಕ್ತ ರಾಜೇಶ್ ಹೆಚ್. ಡಿ ತಂಡ ಎಸ್.ಎಲ್.ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡನ ಒಳ ಆವರಣದಲ್ಲಿ ತಡೆ ಹಿಡಿದಿದೆ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಅಡ್ಡೆ ಮೇಲೆ ಶುಕ್ರವಾರ ಬೆಳಿಗ್ಗೆ ನಸುಕಿನ ಜಾವ ದಾಳಿ ನಡೆಸಿದ ಸಹಾಯಕ ಆಯುಕ್ತ ರಾಜೇಶ್ ಹೆಚ್. ಡಿ 523 ಚೀಲ ಅಕ್ಕಿ ವಶಕ್ಕೆ ಪಡೆದುಕೊಂಡು ಲಾರಿ, ಎರಡು ಪಿಕ್ ಅಪ್ ವಾಹನ, ಇಬ್ಬರು ಗುಜರಾತ್ ಮೂಲದ ಚಾಲಕರು, ಬಳ್ಳಾರಿ ಮೂಲದ ಒಬ್ಬ ಚಾಲಕ, 5 ಹಮಾಲಿಗಳನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಿದ್ದಾರೆ.
ಬಳ್ಳಾರಿ ನಗರದ ಎಸ್.ಎಲ್.ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡನ ಒಳ ಆವರಣದಲ್ಲಿ ಸಾರ್ವಜನಿಕ ಪಡಿತರ ಅಕ್ಕಿಯನ್ನು ಪಿಕ್ ಅಪ್ ವಾಹನಗಳ ಮೂಲಕ ಪಡಿತರ ಅಂಗಡಿಗಳಿಂದ ಅಕ್ರಮವಾಗಿ ಸಂಗ್ರಹಿಸಿ ಗುಜರಾತ್ ಮೂಲದ ಸರಕು ಲಾರಿಯಲ್ಲಿ ಸಾಗಿಸಲು ತುಂಬಿಸುತ್ತಿದ್ದಾಗ ಈ ದಾಳಿ ನಡೆದಿದೆ.
ಒಬ್ಬ ಚಾಲಕ ಮತ್ತು 5 ಹಮಾಲಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ತಯಾರಿ ಮಾಡುತ್ತಿರುವುದಾಗಿ ಗುಜರಾತ್ ಮೂಲದ ಚಾಲಕ ವಿಚಾರಣೆ ವೇಳೆ ತಿಳಿಸಿದ್ದಾನೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


