Wednesday, January 21, 2026
Menu

3 ಕೆಜಿ ಬೆಳ್ಳಿಯಲ್ಲಿ ಮಗಳ ಮದುವೆ ಆಮಂತ್ರಣ ಪತ್ರ ರಚಿಸಿದ ಅಪ್ಪ!

invitation

ಮಗಳ ಮದುವೆಗೆ ಅಪ್ಪಂದಿರು ಸಾಕಷ್ಟು ಕನಸು ಕಾಣುತ್ತಾರೆ. ಈ ಕನಸು ನನಸು ಮಾಡಿಕೊಳ್ಳಲು ಜೀವನಪೂರ್ತಿ ಹಗಲಿರುಳು ದುಡಿಯುತ್ತಾರೆ. ಅಂತಹ ಒಬ್ಬ ಅಪ್ಪ ಮಗಳ ಮದುವೆಗಾಗಿ 3 ಕೆಜಿ ಶುದ್ಧ ಬೆಳ್ಳಿ ಬಳಸಿ 25 ಲಕ್ಷ ರೂ. ವೆಚ್ಚದ ಆಮಂತ್ರಣ ಪತ್ರಿಕೆ ರೂಪಿಸಿ ಗಮನ ಸೆಳೆದಿದ್ದಾರೆ.

ಹೌದು, ಜೈಪುರದ ಶಿವ ಜೊಹ್ರಿ ಎಂಬ ವ್ಯಕ್ತಿ ಮಗಳ ಮದುವೆಗಾಗಿ 3 ಕೆಜಿ ಬೆಳ್ಳಿ ಬಳಸಿ 25 ಲಕ್ಷ ರೂ. ವೆಚ್ಚದ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಈ ಮೂಲಕ ಆಮಂತ್ರಣ ಪತ್ರಿಕೆಗೆ ಹೊಸ ಭಾಷ್ಯ ಬರೆದಿದ್ದಾರೆ.

ಮಗಳು ಶ್ರುತಿ ಜೋಹ್ರಿ ಮದುವೆ ಆಮಂತ್ರಣ ಪತ್ರಕ್ಕೆ 3 ಕೆಜಿ ಶುದ್ಧ ಬೆಳ್ಳಿ ಬಳಸಿದ ಗಣೇಶ ಸೇರಿದಂತೆ 128 ವಿಗ್ರಹಗಳನ್ನು ಹಾಕಲಾಗಿದೆ. ಇಡೀ ಆಮಂತ್ರಣ ಪತ್ರಿಕೆ ಸ್ಕ್ರೂ ಅಥವಾ ಯಾವುದೇ ಬೇರೆ ವಸ್ತುಗಳನ್ನು ಬಳಲಕೆ ಮಾಡದೇ ರೂಪಿಸಲಾಗಿರುವುದು ವಿಶೇಷ.

ಬಾಕ್ಸ್ ಮಾದರಿಯಲ್ಲಿ ಇರುವ ಆಮಂತ್ರಣ ಪತ್ರಿಕೆ ಮೇಲ್ಭಾಗದಲ್ಲಿ ಗಣೇಶನ ವಿಗ್ರಹವಿದ್ದು, ಗಣೇಶ ನಮಃ ಎಂದು ಬರೆಯಲಾಗಿದೆ., ಬಲಭಾಗದಲ್ಲಿ ಪಾರ್ವತಿ ಹಾಗೂ ಎಡಭಾಗದಲ್ಲಿ ಶಿವನ ವಿಗ್ರಹವಿದೆ. ಕೆಳ ಭಾಗದಲಲ್ಲಿ ವಿಷ್ಣು ಮತ್ತು ಲಕ್ಷ್ಮೀ ವಿಗ್ರಹಗಳಿವೆ.

8×6.5 ಇಂಚಿನ ಈ ಆಮಂತ್ರಣ ಪತ್ರಿಕೆಯ ಒಳಗಡೆ 3 ಇಂಚು ಜಾಗ ಬಿಡಲಾಗಿದೆ. ಬಾಕ್ಸ್ ಒಳಗಡೆ ಆಮಂತ್ರಣ ಪತ್ರಿಕೆಯಲ್ಲಿ ಕೃಷ್ಣ, ವಿಷ್ಣು ಇದ್ದು, ದಕ್ಷಿಣ ಭಾರತ ಶೈಲಿಯ ಕೃಷ್ಣನ ವಿಗ್ರಹವಿದೆ. ಕೃಷ್ಣನ ಸುತ್ತ 8 ಹಸುಗಳು ಹಾಗೂ 5 ಆಮೆಗಳು ಇವೆ.

ಮತ್ತೊಂದು ಭಾಗದಲ್ಲಿ ಲಕ್ಷ್ಮೀಯ 8 ಅವತಾರಗಳ ಮೂರ್ತಿಗಳಿವೆ. ಎರಡು ರೀತಿಯ ತಿರುಪತಿ ವೆಂಕಟೇಶ್ವರನ ಚಿತ್ರಗಳು ಇದರಲ್ಲಿವೆ. ಇದೇ ರೀತಿ ಹಲವು ವಿಶೇಷಗಳು ಈ ಆಮಂತ್ರಣ ಪತ್ರಿಕೆಯಲ್ಲಿದ್ದು, ಇದನ್ನು ರೂಪಿಸಲು 1 ವರ್ಷ ತೆಗೆದುಕೊಂಡಿದ್ದಾರೆ.

ಆಮಂತ್ರಣ ಪತ್ರಿಕೆಯನ್ನು ಸ್ವತಃ ನಾನೇ ಮಾಡಿದ್ದು ಇದಕ್ಕಾಗಿ ಒಂದು ವರ್ಷ ವಿನಿಯೋಗಿಸಿದ್ದೇನೆ. ಮಗಳ ಮದುವೆಗೆ ಕೇವಲ ಕುಟುಂಬಸ್ಥರನ್ನು ಮಾತ್ರವಲ್ಲ ಎಲ್ಲಾ ದೇವರನ್ನು ಆಹ್ವಾನಿಸುವುದು ನನ್ನ ಉದ್ದೇಶವಾಗಿತ್ತು. ನನ್ನ ಮಗಳು ಮಾತ್ರವಲ್ಲದೇ ಮುಂದಿನ ತಲೆಮಾರಿಗೂ ಇದು ನೆನಪಾಗಿರಲಿ ಎಂದು ಆಮಂತ್ರಣ ಪತ್ರಿಕೆ ರೂಪಿಸಿದ್ದೇನೆ ಎಂದು ಶಿವ ಜೊಹ್ರಿ ಹೇಳಿದ್ದಾರೆ.

ಆಮಂತ್ರಣ ಪತ್ರಿಕೆಯ ರೂಪುರೇಷೆ ನಿರ್ಧರಿಸಲು 6 ತಿಂಗಳ ಸಮಯ ತೆಗೆದುಕೊಂಡಿದ್ದೇನೆ. ನಂತರ ಇದನ್ನು ಮಾಡಲು 1 ವರ್ಷ ಸಮಯ ಬೇಕಾಯಿತು ಎಂದು ಅವರು ಹೇಳಿದ್ದಾರೆ.

ಕೊನೆಯಲ್ಲಿ ಪುತ್ರಿ ಶ್ರುತಿ ಹಾಗೂ ಭಾವಿ ಪತಿ ಹರ್ಷ್ ಸೋನಿ ಜೊತೆಯಾಗಿ ನಿಂತಿದ್ದು, ಅಕ್ಕಪಕದಲ್ಲಿ ನಿಲ್ಲಿಸಿದ ಆನೆಗಳು ಇವರ ಮೇಲೆ ಹೂವು ಎರಚುವಂತೆ ಚಿತ್ರ ಮಾಡಲಾಗಿದೆ. ಅಲ್ಲದೇ ಮದುವೆಗೆ ಆಹ್ವಾನಿಸಿ ಕುಟುಂಬದ ಎಲ್ಲರ ಹೆಸರನ್ನು ಹಾಕಲಾಗಿದೆ.

Related Posts

Leave a Reply

Your email address will not be published. Required fields are marked *