ಪತ್ನಿಯ ಕೊಲೆ ಆರೋಪದಡಿ 14 ವರ್ಷಗಳ ಶಿಕ್ಷೆಗೆ ಒಳಗಾಗಿ ಧಾರವಾಡ ಜೈಲಿನಲ್ಲಿದ್ದ ಕೈದಿಯೊಬ್ಬರು ಕಾರಾಗೃಹದ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೈಲಿನ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಸಾಪುರದ ಈಶ್ವರಪ್ಪ ಪೂಜಾರ್ ಎಂದು ಗುರುತಿಸಲಾಗಿದೆ.
ಏಳು ವರ್ಷಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಕಾಲ ಜೈಲಿನಲ್ಲೇ ಕಳೆದಿದ್ದ ಈಶ್ವರಪ್ಪ ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಶ್ವರಪ್ಪ ಪೂಜಾರ್ ಜೈಲಿನಲ್ಲಿ ತನ್ನ ಕೆಲಸ ಮುಗಿಸಿ ಸೆಲ್ಗೆ ಬಾರದೆ ನಾಪತ್ತೆಯಾಗಿದ್ದಾಗ ಪೊಲೀಸರು ಹುಡುಕಾಡಿದಾಗ ನಿರ್ಮಾಣ ಹಂತದ ಕಟ್ಟಡದ ಬಳಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಕೈದಿಗಳ ಕೆಲಸ ಮುಗಿದ ನಂತರ ಅವರನ್ನು ಸುರಕ್ಷಿತವಾಗಿ ಸೆಲ್ಗೆ ಕರೆತರುವ ಜವಾಬ್ದಾರಿ ಸಿಬ್ಬಂದಿ ಮೇಲಿತ್ತು. ಆದರೆ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕೇಂದ್ರ ಕಾರಾಗೃಹದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಈಶ್ವರಪ್ಪ ಪೂಜಾರ್ ಜೈಲಿನಲ್ಲಿ ಉತ್ತಮ ನಡವಳಿಕೆ ಹೊಂದಿದ್ದ ಕಾರಣ ಶಿಕ್ಷೆ ಪೂರೈಸುವ ಮುನ್ನವೇ ಬಿಡುಗಡೆ ಮಾಡುವ ಬಗ್ಗೆಯೂ ಚಿಂತನೆ ನಡೆದಿತ್ತು ಎಂದು ಹೇಳಲಾಗಿದೆ. ಈಗ ಕಾರಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


