ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಆಸ್ತಿಗಾಗಿ ಅಣ್ಣನೊಬ್ಬ ಸದ್ಯದಲ್ಲೇ ಮದುವೆಯಾಗಲಿದ್ದ ತಮ್ಮನನ್ನು ಇರಿದು ಕೊಂದಿರುವ ಘಟನೆ ನಡೆದಿದೆ. ಯೋಗೇಶ್ (30) ಅಣ್ಣ ಮತ್ತು ಆತನ ಮಕ್ಕಳಿಂದ ಕೊಲೆಯಾದವರು.
ಯೋಗೇಶ್‌ಗೆ ಇದೇ ತಿಂಗಳು 21 ರಂದು ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮವಿತ್ತು. ಸಂಬಂಧಿಕರಿಗೆಲ್ಲ ಲಗ್ನಪತ್ರಿಕೆ ಹಂಚಿ ಮದುವೆಯ ತಯಾರಿಯಲ್ಲಿದ್ದ ಯೋಗೇಶ್, ಆಸ್ತಿ ಕಿತ್ತುಕೊಂಡರೂ ದ್ವೇಷ ಸಾಧಿಸದೆ ತನ್ನ ಅಣ್ಣ ಲಿಂಗರಾಜು ಮೇಲಿನ ಗೌರವಕ್ಕೆ ಲಗ್ನಪತ್ರಿಕೆಯಲ್ಲಿ ಆತನ ಹೆಸರನ್ನೂ ಹಾಕಿಸಿದ್ದರು. ಆದರೆ ಅಣ್ಣ ಲಿಂಗರಾಜು ಮದುವೆಗೆ 5 ದಿನ ಬಾಕಿ ಇರುವಾಗಲೇ ತಮ್ಮನ ಕೊಂದಿದ್ದಾನೆ.
ಈ ಹತ್ಯೆಯ ಹಿಂದೆ 19 ಎಕರೆ ಜಮೀನಿನ ವಿವಾದವಿದೆ. ತಂದೆಯ ನಿಧನದ ಬಳಿಕ ಸಂಸಾರದ ಜವಾಬ್ದಾರಿ ಹೊತ್ತಿದ್ದ ಅಣ್ಣ ಲಿಂಗರಾಜು ಕುಟುಂಬಕ್ಕೆ ದ್ರೋಹ ಎಸಗಿದ್ದ ಎನ್ನಲಾಗಿದೆ. 12 ಎಕರೆ ಪಿತ್ರಾರ್ಜಿತ ಆಸ್ತಿ ಹಾಗೂ ತಾಯಿಯ ಹೆಸರಿನಲ್ಲಿದ್ದ 6 ಎಕರೆ ಜಮೀನನ್ನು ಸಹೋದರ-ಸಹೋದರಿಯರಿಗೆ ಪಾಲು ನೀಡದೆ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದ. ಮೈಸೂರು ಮತ್ತು ಮಂಡ್ಯದಲ್ಲಿದ್ದ 4 ನಿವೇಶನಗಳನ್ನೂ ತನ್ನ ಹೆಸರಿಗೆ ವರ್ಗಾಯಿಸಿಕೊಂಡು, ನಂತರ ಅವುಗಳನ್ನು ತನ್ನ ಪತ್ನಿಯ ಹೆಸರಿಗೆ ಖಾತೆ ಮಾಡಿಸಿದ್ದ ಎನ್ನಲಾಗಿದೆ.
ಅಣ್ಣ ಮಾಡಿದ್ದ ಈ ವಂಚನೆಯನ್ನು ಪ್ರಶ್ನಿಸಿದ ಯೋಗೇಶ್, ತನ್ನ ಪಾಲಿನ ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದು ಲಿಂಗರಾಜು ಮತ್ತು ಆತನ ಮಕ್ಕಳಾದ ಭರತ್ ಹಾಗೂ ದರ್ಶನ್ ಕೋಪಕ್ಕೆ ಕಾರಣವಾಗಿತ್ತು. ಆಸ್ತಿ ಪಾಲು ಹೋಗಬಾರ ದೆಂದು ಮದುವೆಯ ಸಂಭ್ರಮದಲ್ಲಿದ್ದ ತಮ್ಮನನ್ನು 28 ಬಾರಿ ಇರಿದು ಕೊಲೆ ಮಾಡಲಾಗಿದೆ.
ಈ ಹತ್ಯೆ ಬಗ್ಗೆ ತಿಳಿಯುತ್ತಿದ್ದಂತೆಯೇ ಮಾಯಪ್ಪನಹಳ್ಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಆರೋಪಿ ಲಿಂಗರಾಜುವಿನ ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ತಲೆಮರೆಸಿಕೊಂಡಿರುವ ಲಿಂಗರಾಜು, ಭರತ್ ಹಾಗೂ ದರ್ಶನ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


